ಶನಿವಾರ, ಮಾರ್ಚ್ 30, 2013

General health tips.....

                             ಕೌನ್ಸಿಲಿಂಗ್ ಗೊತ್ತಾ?

ಕೌನ್ಸಿಲಿಂಗ್ ಎಂದರೇನು?
ಕೌನ್ಸಿಲಿಂಗ್ ಎಂದರೆ ಆಪ್ತಸಲಹೆ. ಅಂದರೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿ ನಾವು ಕಾರಣಾಂತರಗಳಿಂದ ವಿಫಲರಾದಾಗ ಅಥವಾ ಪರಿಸ್ಥಿತಿ ನಮ್ಮ ಕೈಮೀರಿದಾಗ, ಅಥವಾ ಅನ್ಯ ಮಾರ್ಗಗಳು ನಮಗೆ ಕಾಣದಾದಾಗ ಕುಟುಂಬದಲ್ಲಿ ಅಥವಾ ನಮ್ಮ ಮಟ್ಟದಲ್ಲಿ ಅವುಗಳಿಗೆ ಪರಿಹಾರ ದೊರಕದಾದಾಗ ನಾವು ಪಡೆಯಬಹುದಾದ ಸೇವೆ ಇದು. ಮನುಷ್ಯ ಸಂಬಂಧಗಳನ್ನು, ಮನಸ್ಸನ್ನು, ಬೆಳವಣಿಗೆಯ ಸವಾಲುಗಳನ್ನು ಅರ್ಥ ಮಾಡಿಕೊಂಡ, ಸೂಕ್ತ ತಿಳುವಳಿಕೆ, ತರಬೇತಿಯನ್ನು ಹೊಂದಿದ ಆಪ್ತ ಸಲಹೆಗಾರರು/ಕೌನ್ಸಿಲರ್‌ಗಳು, ಕೌನ್ಸಿಲಿಂಗ್‌ನಲ್ಲಿ ನಮ್ಮ ಸಮಸ್ಯೆಯನ್ನು ಕೂಲಂಕುಷವಾಗಿ ಆಲಿಸುತ್ತಾರೆ. ನಮ್ಮ ಪರಿಸ್ಥಿತಿ, ನಮಗೊದಗಿದ ಕಷ್ಟಗಳು ಇವುಗಳನ್ನು ಅರ್ಥೈಸಿಕೊಂಡು ಸಮಸ್ಯೆಯನ್ನು ನಮ್ಮ ಮುಂದೆ ಬಿಡಿಸಿಟ್ಟು, ವಿಶ್ಲೇಷಿಸುತ್ತಾರೆ. ಸರಿ-ತಪ್ಪುಗಳನ್ನು ನಾವು ಅರ್ಥ ಮಾಡಿಕೊಳ್ಳಲು ನಮ್ಮ ಮನಸ್ಸನ್ನು ತಿಳಿಗೊಳಿಸುತ್ತಾರೆ. ಸರಿ-ತಪ್ಪುಗಳ ವಿಶ್ಲೇಷಣೆಯನ್ನು ನಡೆಸಿದ ಮನಸ್ಸು, ಸಮಸ್ಯೆಯನ್ನೇ ಹಿಗ್ಗಿಸಿ ದೊಡ್ಡದು ಮಾಡುವುದನ್ನು ತೊರೆದು, ಕಂಡುಕೊಳ್ಳಬಹುದಾದ ಪರಿಹಾರಗಳತ್ತ ಗಮನ ಹರಿಸುವಲ್ಲಿ ಇವರು ನಮಗೆ ಕೈಮರವಾಗುತ್ತಾರೆ. ಕಡೆಗೆ ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಂಡು, ತಲೆಯ ಮೇಲಿನ ಭಾರವನ್ನು ಹಗುರಗೊಳಿಸಿಕೊಂಡು ಹೆಚ್ಚಿನ ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಲು ನಮ್ಮ ಸ್ನೇಹಿತರಾಗಿ ಇವರು ಕಾರ್ಯನಿರ್ವಹಿಸುತ್ತಾರೆ.

ಕಷ್ಟಗಳು ಯಾರಿಗೂ ತಪ್ಪಿದ್ದಲ್ಲ. ಕಷ್ಟದಲ್ಲಿರುವಾಗ ಆಪ್ತಸಲಹೆ ಪಡೆಯುವುದು ಜಾಣತನ. ಕೌನ್ಸಿಲಿಂಗ್‌ಗೆ ಹೋಗುವುದೆಂದರೆ ನಮ್ಮಲ್ಲಿ ದೋಷವಿದೆ ಎಂದಲ್ಲ. ಬದಲಾಗಿ, ಜೀವನದಲ್ಲಿ ಇದೀಗ ಎದುರಾದ ಸಂಕಷ್ಟ, ಸವಾಲನ್ನು ಎದುರಿಸಲು ಈ ಹಂತದಲ್ಲಿ ನನ್ನಲ್ಲಿ ಅವಶ್ಯಕವಾದ ಕೌಶಲ್ಯಗಳು ಇಲ್ಲವೆಂದಷ್ಟೆ. ನಮ್ಮ ಸಮಸ್ಯೆಗಳನ್ನು ಆಲಿಸಿ, ನಮಗೆ ಅಗತ್ಯವಾದ ಕೌಶಲ್ಯಗಳನ್ನು ನಮಗೆ ಮತ್ತೊಬ್ಬರು ನೀಡಬಲ್ಲವರಾದರೆ ಅವರ ಸಹಾಯದಿಂದ ನಾವು ನಮ್ಮ ಸಮಸ್ಯೆ ಬಗೆಹರಿಸಿಕೊಂಡು ಮುನ್ನುಗ್ಗಬಲ್ಲೆವಲ್ಲವೇ?

ಹಾಗಾದರೆ ಬದುಕಿನ ಸವಾಲುಗಳು ಕೆಲವೊಮ್ಮೆ ನಿಮ್ಮನ್ನು ಬೆಚ್ಚಿ ಬೀಳಿಸಿದಾಗ, ಪರಿಹಾರ ಮಾರ್ಗ ತಿಳಿಯದಾದಾಗ ಈ ಸೇವೆಯನ್ನು ಪಡೆಯಬಹುದಲ್ಲವೇ? ಹಿಂಜರಿಕೆ ಏಕೆ?

ಕೌನ್ಸಿಲಿಂಗ್‌ನಲ್ಲಿ ಏನು ನಡೆಯುತ್ತದೆ?
ಕೌನ್ಸಿಲಿಂಗ್‌ನಲ್ಲಿ ಆಪ್ತ ಸಲಹೆಗಾರರು ಸಲಹಾಕಾಂಕ್ಷಿಯ ತೊಂದರೆಯನ್ನು ಅನುಭೂತಿಯಿಂದ ಆಲಿಸುತ್ತಾರೆ, ಅರ್ಥೈಸಿಕೊಳ್ಳುತ್ತಾರೆ. ಸ್ನೇಹಪೂರ್ಣ ಸಂಬಂಧದ ಮೂಲಕ, ಮಾರ್ಗದರ್ಶನದ ಮೂಲಕ ಸಲಹಾಕಾಂಕ್ಷಿಯಲ್ಲಿ ಧೈರ್ಯ, ಆತ್ಮವಿಶ್ವಾಸವನ್ನು ಮೂಡಿಸಲು ನೆರವಾಗುತ್ತಾರೆ. ಈ ಸಂಕಷ್ಟ ಎದುರಿಸುವಲ್ಲಿ ಬೇಕಾದ ಮಾರ್ಗೋಪಾಯಗಳನ್ನು ತೆರೆದಿಡುತ್ತಾರೆ. ಸಮಸ್ಯೆಗೆ ಅನುಗುಣವಾಗಿ ಆಪ್ತ ಸಲಹಾ ಸೇವೆ ನೀಡುತ್ತಾರೆ. ಕೆಲವರಿಗೆ ಮಾತಿನ ಆಲಿಕೆ, ಮಾರ್ಗದರ್ಶನ ಪರಿಹಾರವಾದರೆ, ಇನ್ನು ಕೆಲವರಿಗೆ ನಡವಳಿಕೆಯಲ್ಲಿನ ಮಾರ್ಪಾಡುಗಳು ಅಥವಾ ಥೆರಪಿಗಳು ಅವಶ್ಯಕವಾಗಬಹುದು. ಅವಶ್ಯಕತೆಗೆ ಅನುಗುಣವಾದ ಆಪ್ತಸಲಹೆ ಪಡೆಯುವುದರ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಆಪ್ತ ಸಲಹೆ: ಸತ್ಯಗಳು, ಮಿಥ್ಯ
* ಆಪ್ತಸಲಹೆ ಎಂದರೆ ಉಪದೇಶ ನೀಡುವುದಲ್ಲ; ದೋಷಾರೋಪಣೆ ಅಲ್ಲ, ನಿಮ್ಮ ನಡವಳಿಕೆಯನ್ನು, ನಿಮ್ಮ ವ್ಯಕ್ತಿತ್ವವನ್ನು ಅಳೆಯುವ, ದೂಷಿಸುವ ಕಾರ್ಯವಲ್ಲ. ಬದಲಾಗಿ ನಿಮ್ಮನ್ನು ಇರುವ ಹಾಗೆ ಒಪ್ಪಿಕೊಂಡು, ನಿಮ್ಮ ಮನಃಸ್ಥಿತಿಯನ್ನು ಅರ್ಥ ಮಾಡಿಕೊಂಡು ನಿಮಗೆ ನೆರವಾಗುವ ಒಂದು ಸಹಾಯಹಸ್ತ.

* ಆಪ್ತಸಲಹೆ ಮಾಯಾಜಾಲವಲ್ಲ. ಒದಗಿದ ತೊಂದರೆಗಳನ್ನು ಥಟ್ಟನೆ ನಿವಾರಿಸಬಲ್ಲ ಮಂತ್ರದಂಡ ಆಪ್ತ ಸಲಹೆಗಾರಲಲ್ಲಿಲ್ಲ. ಅವರು ಸಲಹಾಕಾಂಕ್ಷಿಯ ಕಷ್ಟಗಳನ್ನು ಅರಿತು, ಸವಾಲುಗಳನ್ನು ಎದುರಿಸಲು ವಿಭಿನ್ನ ಮಾರ್ಗಗಳನ್ನು ಗುರುತಿಸಲು ನೆರವಾಗುತ್ತಾರೆ. ತೊಂದರೆ ನಿವಾರಣೆಗೆ ಧೈರ್ಯ ತುಂಬುತ್ತಾರೆ.

* ಆಪ್ತ ಸಲಹೆಗಾರರೆಂದರೆ ಕನ್ನಡಿಯ ಹಾಗೆ. ಕನ್ನಡಿಯ ಕೆಲಸ ನಮ್ಮ ವ್ಯಕ್ತಿತ್ವವನ್ನು, ರೂಪ, ದೋಷಗಳನ್ನು ನಮಗೆ ಬಿಂಬಿಸುವುದಷ್ಟೇ. ಕನ್ನಡಿಯೇ ಬಂದು ನಮ್ಮನ್ನು ತಿದ್ದುವುದಿಲ್ಲ, ಸರಿಪಡಿಸುವುದಿಲ್ಲ. ಆಪ್ತ ಸಲಹೆಗಾರರಾದರೂ ಅಷ್ಟೇ, ನಮ್ಮನ್ನು ನಾವಿರುವ ಹಾಗೇ ವಿಶ್ಲೇಷಿಸಿ, ನಾವು ಹೀಗೆ ಇದ್ದರೆ ಹೇಗೆ ಕಾಣುತ್ತೇವೆ, ನಮ್ಮ ನಡವಳಿಕೆ, ಮನೋಭಾವ ಸಮರ್ಪಕವೇ ಎಂದು ನಮ್ಮನ್ನು ಬಿಂಬಿಸಿ ತೋರಿಸುತ್ತಾರೆ. ಅದನ್ನು ಸರಿಪಡಿಸಿಕೊಳ್ಳುವ ಜವಾಬ್ದಾರಿ ನಮ್ಮದು.

* ಆಪ್ತ ಸಲಹೆ ಪಡೆಯುವುದೆಂದರೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಅರ್ಥವಲ್ಲ ಅಥವಾ ಅವನು ರೋಗಿಯೂ ಅಲ್ಲ. ಆಪ್ತ ಸಲಹೆ ಪಡೆಯುವುದು ಸಾಮಾನ್ಯ/ಸಹಜ ಕ್ರಿಯೆ. ಬಂದೊದಗಿದ ಕಷ್ಟಕ್ಕೆ ತಜ್ಞರ ಸ್ಪಂದನವಷ್ಟೆ. ಬದುಕಿನ ತಿರುವಿನಲ್ಲಿ ಕೆಲವೊಮ್ಮೆ ದಾರಿ ಕಾಣದಾದಾಗ ನಮಗೆ ಒದಗಿ ಬರುವ ದೀಪವಷ್ಟೇ.

* ಬದಲಾವಣೆಗೆ ಮಾರ್ಗಗಳನ್ನು ತೋರುವ ಜವಾಬ್ದಾರಿ ಆಪ್ತ ಸಲಹೆಗಾರನದಾದರೆ, ಬದಲಾಗಬೇಕು ಎಂಬ ಆಸೆ ಸಲಹಾಕಾಂಕ್ಷಿಯಲ್ಲಿರಬೇಕು. ಎರಡೂ ಸೇರಿದರೆ ಯಶಸ್ಸು ಸಿದ್ಧ. ಇಲ್ಲವಾದರೆ ಆಪ್ತ ಸಲಹೆ ವಿಫಲವಾಗುವ ಸಾಧ್ಯತೆಯಿದೆ.

* ಮಾನಸಿಕ ಸಮಸ್ಯೆ, ಆಂತರಿಕ ಸಂಬಂಧಗಳ ಸಮಸ್ಯೆ, ಮಕ್ಕಳ ನಡವಳಿಕೆಯ ಸಮಸ್ಯೆ, ವೈವಾಹಿಕ ಬಿಕ್ಕಟ್ಟು, ಶೈಕ್ಷಣಿಕ ಸಂಬಂಧಿ ಸಮಸ್ಯೆ - ಹೀಗೆ ಯಾವುದೇ ಸಮಸ್ಯೆಗೆ ಆಪ್ತ ಸಲಹೆಗಾರರು ನಿಮಗೆ ನೆರವಾಗಬಲ್ಲರು.

* ಸೋಲು, ಹತಾಶೆಯನ್ನು ಎದುರಿಸಲು ಮಾರ್ಗೋಪಾಯಗಳನ್ನು ಕಾಣದೆ ಆತ್ಮಹತ್ಯೆಗೆ ಸುಲಭವಾಗಿ ಮನಸ್ಸನ್ನು ಕೊಡುವ ಇಂದಿನ ಯುವ ಪೀಳಿಗೆಗೆ, ಕೌನ್ಸಿಲಿಂಗ್ ಎನ್ನುವುದು ಮುಳುಗುವವನಿಗೆ ಹುಲುಕಡ್ಡಿ ಸಿಕ್ಕ ಹಾಗೆ.

* ಆಪ್ತ ಸಲಹೆ ಪಡೆಯುವುದರಿಂದ ನಾವು ಆಪ್ತ ಸಲಹೆಗಾರರ ಮೇಲೆ ಸಣ್ಣಪುಟ್ಟ ತೊಂದರೆಗಳ ಪರಿಹಾರಕ್ಕೂ ಅವಲಂಬಿತರಾಗಿ ಬಿಡುತ್ತೇವೆಯೇ ಎಂಬ ಸಂದೇಹ ಬೇಡ. ಆಪ್ತ ಸಲಹಾಕಾಂಕ್ಷಿಯನ್ನು ಜೀವನಪೂರ್ತಿ ಪರಾವಲಂಬಿಗಳನ್ನಾಗಿ ಮಾಡುವುದು ಆಪ್ತ ಸಲಹೆಯ ಉದ್ದೇಶವಲ್ಲ. ಆಪ್ತಸಲಹೆ ಊರುಗೋಲಿನಂತೆ ಮಾತ್ರ. ಮುಂದೆ ಹೆಜ್ಜೆ ಇಡಲು ಬೇಕಾದ ಆಧಾರವನ್ನು ಮಾತ್ರ ಅದು ನೀಡುತ್ತದೆ. ದೃಢ ಹೆಜ್ಜೆ ಹಾಗೂ ಪ್ರಯಾಣ ನಿಮ್ಮದೇ!

     ಥೈರಾಯ್ಡ್ ಕ್ಯಾನ್ಸರ್: ಅಪರೂಪವಾದರೂ ಅಪಾಯ ಕಡಿಮೆ:-

ದೇಹದ ಆಂತರ್ಯದ ಹಲವು ಕಾರ್ಯಗಳಲ್ಲಿ ಸಹಕಾರಿಯಾಗಿರುವ ಥೈರಾಯ್ಡ್ ಅನ್ನು ಕೂಡ ಕ್ಯಾನ್ಸರ್ ಬಿಡುವುದಿಲ್ಲ. ಆದರೆ ಭಯ ಪಡಬೇಕಾದ ಅವಶ್ಯವಿಲ್ಲ. ಏಕೆಂದರೆ ಇದು ಶಸ್ತ್ರಚಿಕಿತ್ಸೆಯಿಂದ ಗುಣಮುಖವಾಗಬಲ್ಲದು.

ಅಪಾಯಕಾರಿ ವಿಕಿರಣಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡವರಲ್ಲಿ, ವಂಶವಾಹಿಯಾಗಿ ಮತ್ತು ಅಪರೂಪಕ್ಕೆ ಎಂಬಂತೆ 40 ವರ್ಷ ಮೀರಿದವರಲ್ಲಿ ಥೈರಾಯ್ಡ್ ಸಂಬಂಧಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಥೈರಾಯ್ಡ್ ಕ್ಯಾನ್ಸರ್ ಸಾಮಾನ್ಯವಾಗಿ ಗಂಟಿನ ರೂಪದಲ್ಲಿ ಕಂಡು ಬರುತ್ತದಾದರೂ, ರೋಗದ ಯಾವುದೇ ಲಕ್ಷಣಗಳನ್ನೂ ತೋರ್ಪಡಿಸುವುದಿಲ್ಲ. ಅಲ್ಲದೆ, ಕೆಲವು ಬಾರಿ ಕ್ಯಾನ್ಸರ್ ಇರುವ ಬಗ್ಗೆ ಲ್ಯಾಬ್‌ಗಳಲ್ಲಿಯೂ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.

ಸಾಮಾನ್ಯವಾಗಿ ಥೈರಾಯ್ಡ್ ಕ್ಯಾನ್ಸರ್ ಪೀಡಿತರಿಗೆ ರೋಗಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣಗಳ ಅನುಭವವಾಗದೇ ಇರಬಹುದು. ಅದರೆ, ಅಪರೂಪಕ್ಕೆ ಎಂಬಂತೆ ಕೆಲ ರೋಗಿಗಳಿಗೆ, ಕುತ್ತಿಗೆ ನೋವು, ದವಡೆಗಳಲ್ಲಿ ನೋವು ಮತ್ತು ಕಿವಿಯ ವಿಪರೀತ ನೋವು ಕಾಣಿಸಿಕೊಳ್ಳಬಹುದು. ಥೈರಾಯ್ಡ್ ಗ್ರಂಥಿಯಲ್ಲಿ ಕಂಡುಬರಬಹುದಾದ ಗಂಟುಗಳು ಸಾಕಷ್ಟು ದಪ್ಪಗಿದ್ದ ಸಂದರ್ಭದಲ್ಲಿ ಶ್ವಾಸನಾಳ ಮತ್ತು ಅನ್ನನಾಳದ ಮೇಲೆ ಒತ್ತಡ ಹಾಕುವ ಸಂದರ್ಭಗಳಿರುತ್ತದೆ. ನಾಳಗಳ ಮೇಲೆ ಒತ್ತಡ ಉಂಟಾಗುವುದರಿಂದ ಉಸಿರಾಟ ತೊಂದರೆ, ಆಹಾರ ಸೇವನೆ ಕಷ್ಟವಾಗಬಹುದು.

ಸಾಮಾನ್ಯವಾಗಿ ಥೈರಾಯ್ಡ್ ಕ್ಯಾನ್ಸರ್ ರೋಗ ಪತ್ತೆಯನ್ನು ಅಸ್ಪಿರೇಷನ್ ಬೈಯಪ್ಸಿ ಮೂಲಕ ಮಾಡಲಾಗುತ್ತದೆ. ನಂತರ ಥೈರಾಯ್ಡ್‌ನಲ್ಲಿರುವ ಗಂಟುಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಯಲಾಗುತ್ತದೆ. ಗಂಟುಗಳು ಸಾಮಾನ್ಯ. ಥೈರಾಯ್ಡ್ ಸಂಬಂಧಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಲ್ಲಿ ಪಪಿಲರಿ ಥೈರಾಯ್ಡ್ ಮತ್ತು ಫೋಲಿಕ್ಯುಲರ್ ತೈರಾಯ್ಡ್ ಕ್ಯಾನ್ಸರ್‌ನ ಪ್ರಮಾಣ ಶೇ. 80ರಿಂದ 95ರಷ್ಟಿರುತ್ತದೆ.

ಚಿಕಿತ್ಸೆ
ಥೈರಾಯ್ಡ್ ಜೀವಕೋಶಗಳು ಮತ್ತು ಥೈರಾಯ್ಡ್ ಕ್ಯಾನ್ಸರ್ ಅಯೋಡಿನ್ ಚಿಕಿತ್ಸೆಗೆ ಬಹುಬೇಗ ಸ್ಪಂದಿಸುತ್ತವೆ. ಆದ್ದರಿಂದಲೇ ರೇಡಿಯೋಕ್ಟಿವ್ ಅಯೋಡಿನ್ ಚಿಕಿತ್ಸೆಯನ್ನು ಥೈರಾಯ್ಡ್ ಕ್ಯಾನ್ಸರ್ ಚಿಕಿತ್ಸೆ ವಿಧಾನದಲ್ಲಿ ಪರಣಾಮಕಾರಿ. ಅಲ್ಲದೆ ಥೈರಾಯ್ಡಕ್ಟಮಿ ನಂತರವೂ ಈ ವಿಧಾನವನ್ನು ಬಳಸಲಾಗುತ್ತದೆ. ಏಕೆಂದರೆ ಅಳಿದುಳಿದ ಕ್ಯಾನ್ಸರ್ ಗೆಡ್ಡೆಗಳು, ಅಂಶಗಳೂ ನಾಶವಾಗಲಿ ಎಂಬ ಉದ್ದೇಶದಿಂದ. ಥೈರಾಯ್ಡ್‌ಗೆ ಕೊಡುವ ಈ ಚಿಕಿತ್ಸಾ ವಿಧಾನವನ್ನು ರೇಡಿಯಾಕ್ಟಿವ್ ಅಯೋಡಿನ್ ಅಬ್ಯಾಲ್ಷನ್ ಎಂದು ಕರೆಯಲಾಗುತ್ತದೆ. ಈ ವಿಧಾನವು ಥೈರಾಯ್ಡ್‌ನಲ್ಲಿರುವ ಡಿಎನ್‌ಎ ನಾಶಗೊಳಿಸುತ್ತಿರುವ ಕ್ಯಾನ್ಸರ್ ಜೀವಕೋಶದ ಮೇಲೆ ಹೆಚ್ಚು ಗಮನಹರಿಸಲಿದ್ದು, ಅಂತಿಮಾಗಿ ಕ್ಯಾನ್ಸರ್ ಜೀವಕೋಶವನ್ನು ಸಂಪೂರ್ಣ ತೊಡೆದುಹಾಕುತ್ತದೆ. ರೇಡಿಯೋ ಅಯೋಡಿನ್‌ನಲ್ಲಿ ರೋಗದ ಚಿತ್ರಣ,ಥೈರಾಯ್ಡ್‌ನ ಯಾವ ಭಾಗದಲ್ಲಿ, ಯಾವ ಪ್ರಮಾಣದಲ್ಲಿ, ಯಾವ ಹಂತದಲ್ಲಿ ಕ್ಯಾನ್ಸರ್ ಜೀವ ಕೋಶ ಬೆಳವಣಿಗೆಯಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

ಕ್ಯಾನ್ಸರ್ ಚಿಕಿತ್ಸೆ ಪಡೆದವರ ದೇಹದಲ್ಲಿ ಹೆಚ್ಚು ವಿಕಿರಣ ಅಂಶಗಳಿದ್ದು, ಗರ್ಭಿಣಿಯರ ಉದರದಲ್ಲಿರುವ ಮಗುವಿಗೆ , ಅಥವಾ ಸಣ್ಣ ಮಕ್ಕಳಿಗೆ ಇದು ಹರಡುವ ಸಾಧ್ಯತೆಗಳಿರುತ್ತವೆ. ಅಲ್ಲದೆ ಚಿಕಿತ್ಸೆಯ ನಂತರ ಹೆಚ್ಚು ಪ್ರಯಾಣಗಳನ್ನು ಕೈಗೊಳ್ಳಬಾರು, ವೈದ್ಯರ ಸಲಹೆ ಇಲ್ಲದೆ ದೂರದ ಪ್ರಯಾಣವನ್ನು ಮಾಡಲೇ ಬಾರದು.

ಏಕೆಂದರೆ, ಪ್ರಯಾಣ ಸಮಯದಲ್ಲಿ ದೇಹಕ್ಕೆ ಕೊಡಲಾದ ರೇಡಿಯಾಕ್ಟಿವ್ ಅಯೋಡಿನ್ ಚಿಕಿತ್ಸೆ ಏರುಪೇರಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಚಿಕಿತ್ಸೆಯ ನಂತರ ವೈದ್ಯರ ಸಲಹೆ ಸೂಚನೆ ಇಲ್ಲದೆ ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗುವುದು ಅಪಾಯಕಾರಿ. ಮತ್ತು ಇನ್ನೊಂದು ಪ್ರಮುಖ ಅಂಶ ರೆಡಿಯಾಕ್ಟಿವ್ ಚಿಕಿತ್ಸೆ ನಂತರ ವೈದ್ಯರ ಸಲಹೆಯಂತೆ ನಿಯಮಿತವಾಗಿ ತಪಾಸಣೆಗೆ ಒಳಪಡಬೇಕು.
                              ಸೌಂದರ್ಯ ರಕ್ಷಣೆ:-

ಬೇಸಿಗೆಯ ಬಿರುಬಿಸಿಲಿಗೆ ಮನೆಯಿಂದ ಹೊರಗೆ ಹೋಗುವುದೇ ದುಸ್ತರವೆನಿಸುತ್ತದೆ. ತ್ವಚೆ ರಕ್ಷಣೆಗೆ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಸೇರಿದಂತೆ ಕೆಲವು ವಿಧಾನ ಅನುಸರಿಸಿದರೆ ಚರ್ಮಕ್ಕೆ ಹಾನಿಯಾಗದಂತೆ ರಕ್ಷಣೆ ನೀಡಬಹುದು.

ಸನ್‌ಸ್ಕ್ರೀನ್
ಬಿಸಿಲಿನಿಂದ ತಲೆಕೂದಲಿನ ರಕ್ಷಣೆಗೆ ಸನ್‌ಸ್ಕ್ರೀನ್ ಜೆಲ್, ದೇಹದ ರಕ್ಷಣೆಗೆ ಸನ್‌ಸ್ಕ್ರೀನ್ ಲೋಷನ್, ಮುಖ ಟ್ಯಾನ್ ಆಗದಿರಲು ಸನ್‌ಸ್ಕ್ರಿನ್ ಕ್ರೀಮ್ ಬಳಸಿ. ಸನ್‌ಸ್ಕ್ರೀನ್‌ನಷ್ಟೇ ಮಾಯಿಶ್ಚರೈಸರ್ ಕೂಡ ಮುಖ್ಯ. ಪ್ರತಿನಿತ್ಯ ಮಾಯಿಶ್ಚರೈಸರ್ ಹಚ್ಚಿದರೆ ಚರ್ಮ ಒಣಗುವುದಿಲ್ಲ.

ಹೊಳೆಯುವ ತ್ವಚೆ
ಬೇಸಿಗೆ ದಗೆ ಹೊರಗೆ ಮಾತ್ರವಲ್ಲ, ದೇಹವೂ ದಣಿಯುವಂತೆ ಮಾಡುತ್ತದೆ. ಹಾಗಾಗಿ ಬೆರ‌್ರಿ, ದಾಳಿಂಬೆ, ಗ್ರೀನ್ ಟೀ, ನಟ್ಸ್, ಬೀನ್ಸ್, ದವಸ ಧಾನ್ಯಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಅಲ್ಲದೆ ಹೆಚ್ಚಿನ ನೀರಿನಂಶವಿರುವ ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ಮೂಸಂಬಿ ಜ್ಯೂಸ್ ಸೇವಿಸುವುದು ಒಳ್ಳೆಯದು.

ಕ್ರೀಮ್ ಬಳಸಿ
ಕ್ರೀಮ್‌ಗಳನ್ನು ರಾತ್ರಿ ಹೊತ್ತು ಹಚ್ಚುವುದು ತುಂಬಾ ಪರಿಣಾಮಕಾರಿ. ಅದರಲ್ಲೂ ನೈಸರ್ಗಿಕವಾದ ಕ್ರೀಮ್ ಬಳಸುವುದು ಒಳ್ಳೆಯದು. ಇದರಿಂದ ತ್ವಚೆಗೆ ಸಂರಕ್ಷಣೆಗೆ ಒಳ್ಳೆಯದು. ಆದ್ದರಿಂದ ಕ್ರೀಮ್ ಗಳನ್ನು ರಾತ್ರಿ ಹೊತ್ತಿನಲ್ಲಿ ಹಚ್ಚಿ. ಕ್ರೀಮ್‌ಗಳನ್ನು ರಾತ್ರಿ ಹಚ್ಚಿದರೆ ತ್ವಚೆ ಕಾಂತಿ ಹೆಚ್ಚಿಸುವ ಕೊಲೆಜಿನ್ ಮತ್ತು ಇಲಾಸ್ಟಿನ್ ಉತ್ಪತ್ತಿಗೆ ಸಹಕಾರಿಯಾಗುತ್ತದೆ.

ಸಿಟ್ರಿಕ್ ಆಸಿಡ್
ಸಿಟ್ರಿಕ್ ಆಸಿಡ್ ಮತ್ತು ಗ್ಲೈಸೋಲಿಕ್ ಆಸಿಡ್ ನಿರ್ಜೀವ ತ್ವಚೆಯನ್ನು ತೊಡೆದು ಹಾಕುತ್ತದೆ. ಅಲ್ಲದೆ, ವಿಟಮಿನ್ ಸಿ ಕೊಲೆಜಿನ್ ಅಂಶ ಹೆಚ್ಚು ಮಾಡಿ ತ್ವಚೆ ಕಾಂತಿ ಹೆಚ್ಚಿಸುವುದಲ್ಲದೆ ಅಕಾಲಿಕ ಮುಪ್ಪನ್ನು ತಡೆಗಟ್ಟುತ್ತದೆ.

ಮುಖಕ್ಕೆ ಸ್ಟೀಮ್
ಮುಖಕ್ಕೆ ಸ್ಟೀಮ್ ಕೊಡಲು ನೀರನ್ನು ಕುದಿಸಿ ಕೊಡುವ ಬದಲು, ಹಾಲನ್ನು ಕುದಿಸಿ ಕೊಟ್ಟರೆ ಹೆಚ್ಚಿನ ಪ್ರಯೋಜನವಿರುತ್ತದೆ. ಅಲ್ಲದೆ, ಮುಖವನ್ನು ಪ್ರತಿ ದಿನ ಕ್ಲೆನ್ಸ್ ಮಾಡಿ ಮಾಯಿಶ್ಚರೈಸರ್ ಮಾಡಿದರೆ ತ್ವಚೆ ಕಾಂತಿಯುತವಾಗುತ್ತದೆ.

                          ಸನ್‌ಟ್ಯಾನ್‌: ಚರ್ಮ ರಕ್ಷಣೆ:-

ಬೇಸಿಗೆ ಈಗಷ್ಟೇ ಆರಂಭವಾಗುತ್ತಿದೆ. ಆದರೆ ಉರಿಬಿಸಿಲು ಮಾತ್ರ ಎಂದಿನಂತೆ ಈ ಬಾರಿಯೂ ಜೋರಾಗಿಯೇ ಇದೆ . ಬಿಸಿಲಿನಲ್ಲಿ ಸ್ವಲ್ಪ ದೂರ ನಡೆದರೂ ಸಾಕು ದಣಿವಾಗಿ , ಮುಖ ಕೆಂಪಾಗುತ್ತದೆ. ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಚರ್ಮವು ಕಪ್ಪಾಗುತ್ತದೆ. ಇದನ್ನು ತಡೆಯಲು ಬಿಸಿಲಿನಲ್ಲಿ ಹೊರ ಹೋಗುವಾಗ ಛತ್ರಿ ಹಿಡಿದುಕೊಂಡು ಹೋಗಿ, ತುಂಬು ತೋಳಿನ ಬಟ್ಟೆ ಧರಿಸಿ ಮುಂತಾದ ಸಲಹೆಗಳನ್ನು ಕೇಳಿರುತ್ತೀರಿ ಮತ್ತು ಅದು ನಿಮಗೂ ಗೊತ್ತಿರುತ್ತದೆ. ಆದರೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಎಣ್ಣೆಗಳಿಂದಲೂ ಸನ್‌ಟ್ಯಾನ್ ತಡೆಗಟ್ಟಬಹುದು ಎಂಬುದು ನಿಮಗೆ ಗೊತ್ತೆ!

ಮನೆಮದ್ದುಗಳು
* ನಿಂಬೆಹಣ್ಣಿನ ರಸ, ರೋಸ್ ವಾಟರ್ ಮತ್ತು ಸೌತೆಕಾಯಿ ರಸ ಇವುಗಳನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಫೇಸ್ ಪ್ಯಾಕ್‌ನಂತೆ ಮುಖಕ್ಕೆ ಅಪ್ಲೈ ಮಾಡಿ . ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇರುವುದರಿಂದ ಅದು ಟ್ಯಾನ್ ಅನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಸೌತೆ ಕಾಯಿ ಮತ್ತು ರೋಸ್ ವಾಟರ್ ಕೂಲಿಂಗ್ ಏಜೆಂಟ್ ಅಗಿ ಕಾರ‌್ಯ ನಿರ್ವಹಿಸುತ್ತವೆ.

* ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪದ ಮಿಶ್ರಣವನ್ನು ಟ್ಯಾನ್ ಉಂಟಾದ ಜಾಗಕ್ಕೆ ಹಚ್ಚಿ. ಇದು ಉತ್ತಮ ಆ್ಯಂಟಿ ಟ್ಯಾನ್ ಪ್ಯಾಕ್ ಆಗಿ ಕಾರ‌್ಯ ನಿರ್ವಹಿಸುತ್ತದೆ.

* ಹಾಲು, ಅರಿಶಿನ ಮತ್ತು ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಅದನ್ನು ಪೇಸ್ಟ್ ಮಾಡಿಕೊಳ್ಳಿ. ಅದನ್ನು ಟ್ಯಾನ್ ಆದ ಜಾಗಕ್ಕೆ ಹಚ್ಚಿ, ಒಣಗುವವರೆಗೆ ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ.

* ಓಟ್ಸ್ ಮತ್ತು ಮಜ್ಜಿಗೆಯ ಮಿಶ್ರಣ ಮಾಡಿ ಅದನ್ನು ಟ್ಯಾನ್ ಆದ ಜಾಗದಲ್ಲಿ ರಬ್ ಮಾಡಿ.

* ಕಡಲೆಹಿಟ್ಟು, ನಿಂಬೆಹಣ್ಣಿನ ರಸ ಮತ್ತು ಮೊಸರನ್ನು ಮಿಶ್ರಣ ಮಾಡಿ ಅದನ್ನು ಟ್ಯಾನ್ ಆದ ಜಾಗಕ್ಕೆ ಹಚ್ಚಿ.

* ನಿಂಬೆಹಣ್ಣಿನ ರಸವನ್ನು ಮೊಣಕೈ, ಮಂಡಿ ಹಾಗೂ ಟ್ಯಾನ್ ಆದ ಜಾಗದಲ್ಲಿಹಚ್ಚಿ. ಇದು ಟ್ಯಾನ್ ಅನ್ನು ಹೋಗಲಾಡಿಸುವ ಜತೆಗೆ ಚರ್ಮವನ್ನು ಕಾಂತಿಯುತವನ್ನಾಗಿ ಮಾಡುತ್ತದೆ.

* ಏಳನೀರನ್ನು ನಿಯಮಿತವಾಗಿ ಮುಖ ಮತ್ತು ಕೈ ಮೇಲೆ ಹಚ್ಚುವುದರಿಂದ ಪರಿಣಾಮಕಾರಿಯಾದ ಫಲಿತಾಂಶವನ್ನು ಕಾಣಬಹುದು. ಜತೆಗೆ ಏಳನೀರು ಚರ್ಮವನ್ನು ಮೃದುವಾಗಿಸಲು ಸಹಕಾರಿಯಾಗಿದೆ.

* ಅಲೋವೆರಾ ಟ್ಯಾನ್ ಹೋಗಲಾಡಿಸಲು ಅತ್ಯುತ್ತಮ ಮನೆಮದ್ದಾಗಿದೆ. ಇದು ಚರ್ಮವನ್ನು ಬಿಗಿಗೊಳಿಸುವ ಜತೆಗೆ ಟ್ಯಾನ್ ಅನ್ನೂ ಹೋಗಲಾಡಿಸುತ್ತದೆ.

* ಹಾಲಿನ ಪುಡಿ, ನಿಂಬೆಹಣ್ಣಿನ ರಸ, ಜೇನು ಮತ್ತು ಬಾದಾಮಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅದನ್ನು ಟ್ಯಾನ್ ಆದ ಜಾಗಕ್ಕೆ ಪ್ರತಿದಿನವೂ ಲೇಪಿಸಿ.

* ಅರಿಶಿನ ಪುಡಿ, ನಿಂಬೆಹಣ್ಣಿನ ರಸ ಮಿಶ್ರಣದ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ವಾರಕ್ಕೆ ಮೂರು ಬಾರಿ ಹಚ್ಚಿ. ಇದು ಚರ್ಮದ ಬಣ್ಣವನ್ನು ತಿಳಿಯಾಗಿಸುವ ಜತೆಗೆ ಟ್ಯಾನ್ ಅನ್ನು ಹೋಗಲಾಡಿಸುತ್ತದೆ.

                        ಬೇಸಿಗೆಯಲ್ಲಿ ಕೂಲ್ ಆಗಿರಬೇಕಾ?

ಚಳಿಗಾಲ ಸರಿದು ಹೋಗಿ, ಈಗ ಬೇಸಿಗೆ ಅಡಿ ಇಟ್ಟಿದೆ. ಸ್ವೆಟರ್, ಕಂಬಳಿ, ಜರ್ಕೀನ್, ಜಾಕೆಟ್ಟುಗಳೆಲ್ಲ ವಾರ್ಡ್‌ರೋಬ್ ಸೇರಿಕೊಂಡಿವೆ. ಬೇಸಿಗೆಯ ಅನುಭವ ಮೈ ತೆರೆದುಕೊಳ್ಳುತ್ತಿದೆ. ಸುಡುವ ಬಿಸಿಲಿನಿಂದ, ಅದರ ತಾಪದಿಂದ ದೂರವಾಗುವ ಯೋಚನೆಯನ್ನು ಎಲ್ಲರೂ ಮಾಡುತ್ತಾರೆ. ಅದರಲ್ಲೂ ಚರ್ಮದ ಆರೈಕೆ ಬೇಸಿಗೆಯಲ್ಲಿ ಬಹಳ ಕಷ್ಟ. ಬಿರು ಬೇಸಿಗೆಗೆ ಚರ್ಮದ ಬಣ್ಣವೇ ಬದಲಾಗಿ ಹೋಗುತ್ತದೆ.

ಕಾಲಕ್ಕೆ ತಕ್ಕಂತೆ ಆರೈಕೆ
ವಾಸ್ತವದಲ್ಲಿ ಬೇಸಿಗೆಯಲ್ಲಿ ಹಗಲು ದೀರ್ಘವಾಗುತ್ತಿದ್ದಂತೆ ತಾಪಮಾನವೂ ಏರುತ್ತದೆ. ವಿಂಟರ್ ಕ್ರೀಮುಗಳು ಈಗ ಉಪಯೋಗಕ್ಕೆ ಬರುವುದಿಲ್ಲ. ಪ್ರಾಕೃತಿಕ ಮಾಯಿಶ್ಚರೈಸರ್ ಈಗ ಅಗತ್ಯ. ಬೇಸಿಗೆಯಲ್ಲಿ ಕೆಲವರಿಗೆ ಒಣಗಿದಂತಾಗುತ್ತದೆ. ಎಣ್ಣೆ ಚರ್ಮದವರಿಗೆ ಇನ್ನಷ್ಟು ಎಣ್ಣೆ ಒಸರುತ್ತದೆ. ಚರ್ಮದ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕಾಗಿದ್ದು ಇಲ್ಲಿ ಅಗತ್ಯ.

ಬಿಸಿಲಿನ ತಾಪ ಎಷ್ಟೇ ಜಾಸ್ತಿ ಇರಲಿ, ಮತ್ತೆ ಮತ್ತೆ ಸಾಬೂನು ಬಳಸುವುದರಿಂದ ಚರ್ಮಕ್ಕೆ ಹಾನಿ. ಹೆಚ್ಚು ಬೆವರಿದ ನಂತರ ಮುಖ, ಕೈಕಾಲು, ಚರ್ಮ ಒಣಗಿದಂತೆ ಕಂಡುಬಂದರೆ ಆಗಾಗ ತಣ್ಣೀರಿನಿಂದ ತೊಳೆದುಕೊಳ್ಳಿ. ಟವೆಲ್‌ನಿಂದ ಮುಖವನ್ನು ಉಜ್ಜಿ ಒರೆಸುವುದು ಬೇಡ. ಕೆಲವೇ ಕ್ಷಣಗಳಲ್ಲಿ ನಿಮ್ಮ ದೇಹ ಆ ನೀರನ್ನು ಹೀರಿಕೊಂಡು ಬಿಡುತ್ತದೆ.

ಬೇಸಿಗೆಯಲ್ಲಿ ಕಾಡುವ ಮತ್ತೊಂದು ಸಮಸ್ಯೆ ಎಂದರೆ ಸನ್‌ಬರ್ನ್. ಇದರಿಂದಾಗಿ ಮುಖ, ಕೈ,ಬೆನ್ನು, ಕುತ್ತಿಗೆ ಮೇಲೆ ಕಪ್ಪು ಅಥವಾ ಕಂದು ಬಣ್ಣದ ಮಚ್ಚೆಗಳು ಕಂಡುಬರುತ್ತವೆ ಮತ್ತು ಚರ್ಮದಲ್ಲಿ ಉರಿಯೂ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ನೀವು ಎರಡು ದಿನಕ್ಕೊಮ್ಮೆ ಸೌತೇಕಾಯಿ ಪ್ಯಾಕ್ ಅಥವಾ ಚಂದನದ ಪ್ಯಾಕ್ ಅನ್ನು ಮನೆಯಲ್ಲೇ ತಯಾರಿಸಿ ಹಚ್ಚಿಕೊಳ್ಳಬಹುದು. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಯಥೇಚ್ಛವಾಗಿ ಸಿಗುವುದರಿಂದ ಅದರ ರಸದಿಂದ ಮುಖ, ಕೈ-ಕಾಲು ತೊಳೆಯುವುದರಿಂದಲೂ ಚರ್ಮದ ಸಮಸ್ಯೆಗಳಿಂದ ದೂರ ಉಳಿಯಬಹುದು.

ಮಾರುಕಟ್ಟೆಯಲ್ಲಿ ನಿಮ್ಮ ಚರ್ಮಕ್ಕೆ ಸರಿಹೊಂದುವ ಬಾಡಿ ಲೋಶನ್, ಮಾಯಿಶ್ಚರೈಸರ್ ಕ್ರೀಮುಗಳು ಲಭ್ಯ. ಅವುಗಳನ್ನು ಸಹ ನೀವು ಪ್ರತಿನಿತ್ಯ ಹಚ್ಚಿಕೊಳ್ಳಬಹುದು. ಮನೆಯಿಂದ ಹೊರಹೋಗುವಾಗ ಸನ್ ಕ್ರೀಮ್ ಲೋಶನ್ ಹಚ್ಚಿಕೊಳ್ಳಿ. ಆದರೆ ಇಂತಹ ಕ್ರೀಮುಗಳನ್ನು ತೆಗೆದುಕೊಳ್ಳುವ ಮುನ್ನ ಕಂಪನಿಯ ಗುಣಮಟ್ಟ ಮತ್ತು ಉತ್ಪಾದನಾ ದಿನಾಂಕ ನೋಡಿಕೊಳ್ಳಿ.

ಮೈಯಿಂದ ದುರ್ವಾಸನೆ ಬರದಿರಲು ಬಾಡಿಬ್ರಷ್ ಅಥವಾ ಲೂಫಾ ಉಪಯೋಗಿಸಿ. ಕೈ-ಕಾಲುಗಳನ್ನು ತಿಕ್ಕುವುದರಿಂದ ಚರ್ಮದ ಮೃತಕೋಶಗಳು ಹೊರಟು ಹೋಗುತ್ತವೆ. ರಕ್ತಸಂಚಾರ ತೀವ್ರವಾಗಿ ಸಾಗುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಾಗುವುದು. ಸ್ನಾನದ ನೀರಿಗೆ ಲಾವಂಚದ ಬೇರು ಮತ್ತು ಕೊಬ್ಬರಿ ಎಣ್ಣೆ ಹಾಕಿಕೊಳ್ಳುವುದರಿಂದ ಚರ್ಮ ಸದಾ ಕೂಲ್ ಆಗಿ ಇರುವುದು. ಸ್ನಾನದ ಟಬ್‌ಗೆ ಗುಲಾಬಿ ಪಕಳೆ ಹಾಕಿಕೊಂಡು ಅರ್ಧಗಂಟೆ ಅದರಲ್ಲಿ ವಿಶ್ರಮಿಸುವುದರಿಂದ ಕಾಂತಿಯನ್ನು ಕಾಪಾಡಿಕೊಳ್ಳಬಹುದು.

ಬೇಸಿಗೆಯಲ್ಲಿ ಹಸಿವೆ ಕಡಿಮೆ, ದಾಹ ಹೆಚ್ಚು . ಹಾಗಾಗಿ ನೀರನ್ನು, ಹಣ್ಣಿನ ರಸವನ್ನು ಆಗಾಗ ಸೇವಿಸಬೇಕು. ಸೆಕೆ ಎಂದು ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತ ರಾತ್ರಿ ಕಳೆದರೂ ಚರ್ಮ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಕಣ್ತುಂಬಾ ನಿದ್ದೆ ಮಾಡಿ. ನೀವು ನಿದ್ರಿಸುವ ಜಾಗದಲ್ಲಿ ಸಹಜವಾದ ಗಾಳಿ ಬರುವಂತೆ ನೋಡಿಕೊಳ್ಳಿ.

                              ಕೀಲು ನೋವಿಗೆ ಪರಿಹಾರ:-
ಸಾರ್ವಜನಿಕರ ಕೀಲು ನೋವಿನ ಸಮಸ್ಯೆಗಳಿಗೆ ಡಾ. ಶ್ರೀಕಾಂತ್ ಮೊರಲ್ವಾರ್ ಸಿಎಂಡಿ ಹೋಮಿಯೋಕೇರ್ ಇಂಟರ್ ನ್ಯಾಷನಲ್ ಅವರ ಪ್ರತಿಕ್ರಿಯೆ

ಪ್ರಶ್ನೆ:ರುಮಾಟೋಡ್ ಆರ್ಥೈಟಿಸ್ ಆನುವಂಶೀಯ ಕಾಯಿಲೆಯಾ?
ಉ: ಅಲ್ಲ, ಕೆಲವು ಜೀನ್ಸ್‌ಗಳು ಕಾರಣ.100ರಲ್ಲಿ ಒಬ್ಬರು ಈ ಕಾಯಿಲೆಯಿಂದ ಬಳಲುತ್ತಾರೆ.

ಪ್ರಶ್ನೆ:ರುಮಾಟೋಡ್ ಆರ್ಥೈಟಿಸ್‌ಗೆ ಕಾರಣವೇನು ಮತ್ತು ಇದು ಎಷ್ಟರ ಮಟ್ಟಿಗೆ ಜನರ ಜೀವನದ ಮೇಲೆ ಅನಾನುಕೂಲ ಪರಿಣಾಮ ಬೀರುತ್ತದೆ?
ಉ:ಇದು ಅಟೊ ಇಮ್ಯೂನ್ ಕಾಯಿಲೆಯಾಗಿದ್ದು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ದೇಹದ ಆರೋಗ್ಯಕರ ಕಣಗಳನ್ನು ಮತ್ತು ಟಿಶ್ಯೂವನ್ನು ಹಾಳುಮಾಡಿ ಅದರಿಂದ ಕಾಯಿಲೆ ಬರುವುದಕ್ಕೆ ಮಾರ್ಗದರ್ಶನ ನೀಡಿದಂತಾಗುತ್ತದೆ. ಇದೇ ಮುಖ್ಯ ಕಾರಣವಲ್ಲ. ಕೆಲವು ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಬರಬಹುದು.

ರೋಗ ನಿರೋಧಕ ಶಕ್ತಿ ಕುಂದಿದಲ್ಲಿ ಅಂತ ಒಂದು ಸಮಸ್ಯೆಗೆ ಹೋಮಿಯೋಪಥಿ ವೈದ್ಯ ಚಿಕಿತ್ಸೆ ಪರಿಣಾಮಕಾರಿ. ಇದರಿಂದ ಯಾವುದೇ ಂದು ರೋಗದ ಲಕ್ಷಣದಿಂದ ಮುಕ್ತಿ ಹೊಂದುವುದರ ಜತೆಗೆ ಅದರ ಒಂದು ತೀವ್ರತೆ , ನೋವಿನ ಸಾಂದ್ರತೆತಯನ್ನು ಕಡಿಮೆ ಮಾಡಬಹುದು.

ಪ್ರಶ್ನೆ:ಯಾರು ಈ ಸಮಸ್ಯೆಗೆ ಒಳಗಾಗುತ್ತಾರೆ?
ಉ: 50ರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣಿಸುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವಯಸ್ಕರು ಹಾಗೂ ಮದ್ಯಮ ವಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಮಕ್ಕಳಲ್ಲೂ ಕಂಡು ಬರಬಹುದು. ಇದಕ್ಕೆ ಧೂಮಪಾನವೂ ಕೂಡ
ಕಾರಣ.

ಪ್ರಶ್ನೆ: ಇದು ಹೆಚ್ಚಾಗಿ ವಯಸ್ಸಾದವರಲ್ಲಿ ಮಾತ್ರ ಕಾಣುವ ಕಾಯಿಲೆಯೇ ಅಥವಾ ಯಾವ ವಯಸ್ಸಿನಲ್ಲಾದರೂ ಕಾಣಬಹುದಾ?
ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಶೇ.80ರಷ್ಟು ರೂಮಾಟೋಡ್ ಆರ್ಥೈಟಿಸ್ 35-50 ವರ್ಷದೊಳಗೆ ಯಾವಾಗ ಬೇಕಾದರೂ ಕಾಣಿಸಬಹುದು.

ಪ್ರಶ್ನೆ: ಯಾವ ಒಂದು ಸರ್ಜಿಕಲ್ ಚಿಕಿತ್ಸೆ ಈ ರೂಮಾಟೋಡ್ ಆರ್ಥೈಟಿಸ್‌ನಲ್ಲಿ ಇರುತ್ತದೆ ಮತ್ತು ಎಷ್ಟು ಪರಿಣಾಮಕಾರಿ? ಹೋಮಿಯೋಪಥಿ ಇದನ್ನು ತಡೆಗಟ್ಟಲು ಎಷ್ಟರಮಟ್ಟಿಗೆ ಪರಿಣಾಮಕಾರಿ?

ಉ:ರೂಮಾಟೋಡ್ ಆರ್ಥೈಟಿಸ್ ಎನ್ನುವುದು ಎಲ್ಲಾ ಕೀಲುಗಳಲ್ಲಿ ಮುಖ್ಯವಾಗಿ ಸಣ್ಣ ಸಂದುಗಳಲ್ಲಿ ಕಾಣಿಸುತ್ತದೆ. ಎಲ್ಲದಕ್ಕೂ ಸರ್ಜಿಕಲ್ ಚಿಕಿತ್ಸೆ ಫಲಪ್ರದವಲ್ಲ. ಈ ಸರ್ಜರಿ ಮೂಲಕ ನೋವಿನಿಂದ ಮುಕ್ತಿ ಹೊಂದಬಹುದು ಮತ್ತು ಸಂದುಗಳಲ್ಲಿ ಚಲನವಲನ ಸರಾಗವಾಗಿ ಆಗುವಂತೆ ಮಾಡಬಹುದು. ಇದಕ್ಕೆ ಕ್ರಮಬದ್ಧ ಚಿಕಿತ್ಸೆಯ ಅಗತ್ಯ ಇದೆ. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಹೋಮಿಯೋಕೇರ್‌ನಲ್ಲಿ ನೀಡಲಾಗುತ್ತದೆ.

ಗುಣಮಟ್ಟದ ಔಷಧಗಳ ಮೂಲಕ ರೋಗದ ಆಳದವರೆಗೂ ಹೋಗಿ ಕಾಯಿಲೆಯನ್ನು ಬುಡಸಮೇತ ನಾಶ ಮಡುತ್ತದೆ. ಹೋಮಿಯೋಪಥಿ ಪದ್ಧತಿಯು ಪರ್ಯಾಯ ಚಿಕಿತ್ಸಾ ಪದ್ಧತಿಗಿಂತ ಫಲಪ್ರದ.

ಪರ್ಯಾಯ ಚಿಕಿತ್ಸಾ ಪದ್ಧತಿಯಲ್ಲಿ ಆಂಟಿ ಇನ್‌ಫ್ಲಾಮೇಟರಿ ಡ್ರಗ್ಸ್ ಮತ್ತು ಕೊರ್ಟಿಕೋ ಸ್ಟೆರಾಯ್ಡ್‌ಗಳನ್ನು ಹೇರಳವಾಗಿ ಬಳಸುವುದರಿಂದ ಅಡ್ಡ ಪರಿಣಾಮ ಹೆಚ್ಚಾಗಿ ಕಾಣಿಸುತ್ತದೆ. ಆದರೆ ಹೋಮಿಯೋಪಥಿಯಲ್ಲಿ ಅಡ್ಡ ಪರಿಣಾಮವಿಲ್ಲ. ರೂಮಾಟೋಡ್ ಆರ್ಥೈಟಿಸ್‌ನಲ್ಲಿ ದೇಹದ ಹೋರಾಡುವ ಶಕ್ತಿ ಕಡಿಮೆಯಾಗುವುದರಿಂದ ಹೋಮಿಯೋಪಥಿ ಚಿಕಿತ್ಸೆಯಲ್ಲಿ ಕಾನ್‌ಸ್ಟಿಟ್ಯೂಷನಲ್ ಚಿಕಿತ್ಸೆ ಕೊಡಲಾಗುತ್ತದೆ. ಇದರಿಂದ ದೇಹದ ಶಕ್ತಿಯನ್ನು ಹೆಚ್ಚಿಸುವುದರ ಜತೆ ರೋಗದಿಂದ ಉಂಟಾಗುವ ತೊಂದರೆಗಳನ್ನು ನಿವಾರಣೆ ಮಾಡಿ ಅವರ ದಿನನಿತ್ಯದ ಕೆಲಸಗಳನ್ನು ಸರಾಗವಾಗಿ ಮಾಡಬಹುದು.

                   ಮಧುಮೇಹ ನಿಮ್ಮ ಹೃದಯಕ್ಕೂ ಅಪಾಯ:-

ಮಧುಮೇಹ ಇದೆ ಅಂತಾದರೆ ನಿಮ್ಮ ಹೃದಯದ ಬಗ್ಗೆಯೂ ಕಾಳಜಿ ವಹಿಸುವುದು ಸೂಕ್ತ. 

ಏಕೆಂದರೆ ಮಧುಮೇಹ ಮತ್ತು ಹೃದಯ ಕಾಯಿಲೆಗಳಿಗೂ ಸಂಬಂಧವಿದೆ. ರಕ್ತದ ಹರಿವಿನಲ್ಲಿ ಹೆಚ್ಚಿನ ಪ್ರಮಾಣದ ಗ್ಲೂಕೋಸ್ ಸೇರಿಕೊಂಡರೆ, ಅದು ರಕ್ತ ನಾಳಗಳಿಗೆ ಹಾನಿ ಮಾಡಲಿದ್ದು, ನಾಳಗಳು ಒರಟು ಮತ್ತು ಕಠಿಣವಾಗುತ್ತವೆ. ಈ ರಕ್ತ ನಾಳಗಳ ಒಳಗೆ ಬೆಳೆಯುವ ಕೊಬ್ಬಿನ ಅಂಶವು ಒಂದು ಸಂದರ್ಭದಲ್ಲಿ ಹೃದಯ ಮತ್ತು ಮೆದುಳಿಗೆ ರಕ್ತ ಸಂಚಾರವನ್ನು ಸ್ಥಗಿತಗೊಳಿಸುತ್ತದೆ. ಇದು ಹದಯಾಘಾತ ಅಥವಾ ಪಾರ್ಶ್ವವಾಯು ಸಂಭವಿಸಲು ದಾರಿ ಮಾಡಿಕೊಡುತ್ತದೆ.

ಮಧುಮೇಹ ಹೃದಯ ಕಾಯಿಲೆ
ಮಧುಮೇಹ ಹೃದಯ ಕಾಯಿಲೆ (ಡಯಾಬಿಟಿಕ್ ಹಾರ್ಟ್ ಡಿಸೀಸ್-ಡಿಹೆಚ್‌ಡಿ) ಎಂದರೆ ಮಧುಮೇಹ ಹೊಂದಿರುವವರಲ್ಲಿ ಕಾಣಿಸಿಕೊಳ್ಳುವ ಹೃದಯದ ಕಾಯಿಲೆ.

ಮಧುಮೇಹದ ಹೃದಯ ಕಾಯಿಲೆಗಳಿಗೆ ಸಂಬಂಧ ಕಲ್ಪಿಸುವ ಇತರ ಅಂಶಗಳೆಂದರೆ ಅತಿಯಾದ ರಕ್ತದೊತ್ತಡ, ಅಸಮರ್ಪಕವಾಗಿ ನಿರ್ವಹಿಸಲ್ಪಡುವ ರಕ್ತದ ಸಕ್ಕರೆ ಪ್ರಮಾಣ ಮತ್ತು ಅತಿಯಾದ ಕೊಲೆಸ್ಟ್ರಾಲ್, ಬೊಜ್ಜು ದೇಹ ಮತ್ತು ದೈಹಿಕ ಚಟುವಟಿಕೆ ಕೊರತೆ, ಮಧುಮೇಹ ಹೊಂದಿರುವವರು ಧೂಮಪಾನಿಗಳಾಗಿದ್ದರೆ ಮಧುಮೇಹ ಹೃದಯ ಕಾಯಿಲೆಗೆ ಒಳಗಾಗುವ ಸಾಧ್ಯತೆ ದುಪ್ಪಟ್ಟು. ಒಂದು ವೇಳೆ ನೀವು ಮಧುಮೇಹ ಹೊಂದಿದ್ದರೆ ಹೃದಯ ಕಾಯಿಲೆಗೆ ಒಳಪಡುವ ಸಾಧ್ಯತೆ ಹೆಚ್ಚು ಎಂಬುದನ್ನು ಅಂಕಿಅಂಶಗಳು ದಢಪಡಿಸುತ್ತವೆ.

ಹೃದಯ ಕಾಯಿಲೆಯಿಂದ ದೂರವಿರಲು
ಸದಾ ಚಟುವಟಿಕೆಯಿಂದಿರಿ. ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಲೇಬೇಕೆಂಬ ಗುರಿ ಇಟ್ಟುಕೊಳ್ಳಿ. ಹಾಗೇ ವ್ಯಾಯಾಮದ ಅವಧಿಯನ್ನು ನೀವೇನಾದರೂ 10 ನಿಮಿಷ ಹೆಚ್ಚು ಮಾಡಿಕೊಂಡರೆ ನಿಮಗೆ ಹೃದಯದ ಎಲ್ಲ ಲಾಭಗಳು ಲಭ್ಯವಾಗುತ್ತವೆ.

ನಿರ್ದಿಷ್ಟ ಸಸ್ಯ, ವಿಟಮಿನ್ ಮತ್ತು ಖನಿಜಾಂಶಗಳು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಹಜ ಸ್ಥಿತಿ ತಲುಪುತ್ತದೆ. ಪೂರಕ ಮತ್ತು ಪರ್ಯಾಯ ಚಿಕಿತ್ಸೆ ಮೂಲಕ ಮಧುಮೇಹ ಮತ್ತು ಕಾರ್ಡಿಯೋವ್ಯಾಸ್ಕುಲರ್ ಕಾಯಿಲೆಗಳನ್ನು ತಡೆಗಟ್ಟಬಹುದು. ಆಹಾರ ಪದ್ಧತಿಯಲ್ಲಿ ಬದಲಾವಣೆಯ ಜತೆಗೆ ಕೆಲವು ಅತ್ಯುತ್ತಮ ಥೆರಪಿಗಳೆಂದರೆ ಕಿಲೈಷನ್ (Akhob|asq) ಮತ್ತು ಓಝೋನ್ ಥೆರಪಿ.

ಕಿಲೈಷನ್ ಥೆರಪಿ ಅಭಿದಮನಿಯ ನಾನ್-ಸರ್ಜಿಕಲ್ ಚಿಕಿತ್ಸೆಯಾಗಿದ್ದು, ಗಡುಸಾದ ಲೋಹಗಳನ್ನು ಸ್ಫೋಟಿಸಿ ಅಥವಾ ಕರಗಿಸಿ, ಕ್ಯಾಲ್ಷಿಯಂ ಪ್ಲಕ್ಯು ಅನ್ನು ಹೋಗಲಾಡಿಸುತ್ತದೆ ಹಾಗೂ ರಕ್ತನಾಳಗಳಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ. ಈ ಮೂಲಕ ಹದಯ ಸಂಬಂಧಿ ಕಾಯಿಲೆಗಳು ಹಾಗೂ ಪಾರ್ಶ್ವವಾಯುವಿನ ಅಪಾಯವನ್ನು ಕ್ಷೀಣಿಸುವಂತೆ ಮಾಡುತ್ತದೆ.

ಓಝೋನ್ ಎಂದರೆ ಅತ್ಯಂತ ಪ್ರಭಾವಶಾಲಿಯಾಗಿರುವ ಥೆರಪಿ ಸಾಧನವಾಗಿದ್ದು, ಆರೋಗ್ಯದ ದಷ್ಟಿಯಿಂದ ದೇಹಕ್ಕೆ ನೆರವಾಗುತ್ತದೆ. ಹಾಗೆಯೇ ಕೊನೆಯಲ್ಲಿ, ದೇಹವನ್ನು ಗುಣಪಡಿಸುವ ನಿಟ್ಟಿನಲ್ಲಿ ಪ್ರತಿರೋಧಕ ವ್ಯವಸ್ಥೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಮಧುಮೇಹಕ್ಕೆ ಸಂಬಂಧಿಸಿದ ಪ್ರಕರಣಗಳ ಚಿಕಿತ್ಸೆಯಲ್ಲಿ, ಓಝೋನ್ ಥೆರಪಿಯು ರಕ್ತ ಸಂಚಾರವನ್ನು ವೃದ್ಧಿಸುತ್ತದೆ, ಅಪಘಾತ ನಿರೋಧಕ ರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರತಿರೋಧಕ ಜೀವಕೋಶಗಳನ್ನು ಸಕ್ರಿಯಗೊಳಿಸುತ್ತದೆ.
                         ಗ್ಲಾಕೋಮಾ: ದೃಷ್ಟಿ ಹಂತಕ:-

ವಿಶ್ವ ಗ್ಲಾಕೋಮಾ ಸಪ್ತಾಹ ಮಾ.16ರವರೆಗೆ ನಡೆಯಲಿದೆ. ಈ ಸಪ್ತಾಹದ ಮೂಲಕ ಗ್ಲಾಕೋಮಾ ಬಗ್ಗೆ ಅರಿವು ಮೂಡಿಸಲಾಗುವುದು.

ದೃಷ್ಟಿ ನರ ಮತ್ತು ದೃಷ್ಟಿ ಕ್ಷೇತ್ರದ ಬದಲಾವಣೆಗಳೊಂದಿಗೆ ಮುಂದುವರೆದ ಆಪ್ಟಿಕ್ ನ್ಯೂರೋಪಥಿ ದೋಷವೇ ಗ್ಲಾಕೋಮಾ. ಇಂಟ್ರಾ ಆಕ್ಯುಲರ್ ಪ್ರೆಷರ್ ಎಂದು ಕರೆಯಲ್ಪಡುವ ಕಣ್ಣಿನ ಒಳಗಿನ ಒತ್ತಡವು ಸಾಮಾನ್ಯ ಗಂಡಾಂತರಕಾರಿ ಅಂಶ. ಕಣ್ಣಿನಲ್ಲಿ ಒತ್ತಡ ಹೆಚ್ಚಾದಂತೆ ಇದು ಕಣ್ಣಿನಿಂದ ಮೆದುಳಿಗೆ ಸಂದೇಶಗಳನ್ನು ಕೊಂಡ್ಯೊಯುವ ಹಾಗೂ ನಮಗೆ ನೋಡಲು ಸಾಧ್ಯವಾಗುವ ಆಪ್ಟಿಕ್ ನರ್ವ್ ಫೈಬರ್‌ಗಳ ಮೇಲೆ ಪರಿಣಾಮ ಬೀರಲು ಅರಂಭಿಸುತ್ತದೆ. ನರ್ವ್ ಫೈಬರ್‌ಗಳಿಗೆ ಹಾನಿ ಉಂಟಾದರೆ ಫೀಲ್ಡ್ ಆಫ್ ವಿಷನ್ ಮೇಲೆ ನಿಧಾನವಾಗಿ ಪರಿಣಾಮ ಉಂಟಾಗುತ್ತದೆ. ಅರಂಭದಲ್ಲಿ ವರ್ತುಲ ಕ್ಷೇತ್ರಕ್ಕೆ ಮಾತ್ರ ಇದು ಕಂಡು ಬಂದು ಮುಂದುವರೆದ ಹಂತದಲ್ಲಿ ಮಾತ್ರ ಕೇಂದ್ರ ದಷ್ಟಿ ಮೇಲೆ ಪರಿಣಾಮ ಬೀರುತ್ತದೆ. ಗ್ಲಾಕೋಮಾದಲ್ಲಿ ಕಂಡುಬರುವ ಇಂಥ ಎಲ್ಲ ಬದಲಾವಣೆಗಳು ಮಾರ್ಪಡಿಸಲು ಸಾಧ್ಯವಾಗದೆ ಇರುವಂಥದ್ದು. ಈ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸಬಹುದು. ರೋಗ ಪತ್ತೆ

40 ವರ್ಷಗಳ ಮೇಲ್ಪಟ್ವರು ಆಪ್ಟಿಕ್ ನರ್ವ್‌ನ ಎಚ್ಚರಿಕೆಯ ಮೌಲ್ಯ ಮಾಪನ ಮತ್ತು ಕಣ್ಣಿನ ಒತ್ತಡದ ಮಾಪನ ಸೇರಿದಂತೆ ಅಗಾಗ ಸಮಗ್ರ ನೇತ್ರ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಮುಖ್ಯ. ಆದ್ದರಿಂದ ಈ ವಯೋಮಾನಕ್ಕೆ ಮೇಲ್ಪಟ್ಟ ಎಲ್ಲರೂ ಗ್ಲಾಕೋಮಾ ತಪಾಸಣೆಗೆ ಒಳಪಡಬೇಕಾದುದು ಕಡ್ಡಾಯ. ಗ್ಲಾಕೋಮಾ ಸಮಸ್ಯೆ ಕಾಣಿಸಿಕೊಳ್ಳಲು ಅವಕಾಶ ಇರುವ ಮಂದಿ ಪೂರಕ ಕುಟುಂಬ ಹಿನ್ನಲೆ, ಡಯಾಬಿಟಿಸ್, ಸಮೀಪ ದಷ್ಟಿ, ಕಣ್ಣಿಗೆ ಪೆಟ್ಟು ಹಾಗೂ ಯಾವುದೇ ರೀತಿಯ ಸ್ಟಿರಾಯ್ಡ್ ಚಿಕಿತ್ಸೆಗೆ ಒಳಗಾಗಿರುತ್ತಾರೆ. ಮಕ್ಕಳಿಗೂ ಗ್ಲಾಕೋಮಾ ಹಾನಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಇದದನ್ನು ಕಾಂಜೆನಿಟಲ್ (ಸಜಾತಿ) ಅಥವಾ ಅಭಿವದ್ದಿ ಹೊಂದುತ್ತಿರುವ ಗ್ಲಾಕೋಮಾ ಎಂದು ಕರೆಯಲಾಗುತ್ತದೆ. ಜೀವನದ ಆರಂಭಿಕ ಮಾಸಗಳಲ್ಲಿ ಈ ರೋಗ ಮಕ್ಕಳಲ್ಲಿ ಕಂಡುಬಂದರೆ (ಭಾರತದಲ್ಲಿ 3,300ಕ್ಕೆ 1 ಪ್ರಕರಣ) ತಕ್ಷಣ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದರೆ, ಅವರ ಜೀವನದಲ್ಲಿ ಅಂಧತ್ವದ ಕತ್ತಲು ಕವಿಯುತ್ತದೆ.

ಗ್ಲಾಕೋಮಾ ಚಿಕಿತ್ಸೆ
ಗ್ಲಾಕೋಮಾಗೆ ಔಷಧಿಗಳು, ಲೇಸರ್‌ಗಳು ಮತ್ತು ಮೈಕ್ರೋಸರ್ಜರಿಯಂಥ ವ್ಯಾಪಕ ಶ್ರೇಣಿಯ ಚಿಕಿತ್ಸೆ ನೀಡಬಹುದು. ಗ್ಲಾಕೋಮಾದ ವಿಧ ಮತ್ತು ತೀವ್ರತೆಗೆ ಅನುಗುಣವಾಗಿ ಇದರ ನಿರ್ವಹಣೆ ಭಿನ್ನವಾಗಿರುತ್ತದೆ. ಯಾವುದೇ ರೀತಿಯ ಚಿಕಿತ್ಸೆಯನ್ನು ಹೊರತುಪಡಿಸಿ, ನಿಯತಕಾಲಿಕ ತಪಾಸಣೆ ರೋಗವನ್ನು ನಿಯಂತ್ರಿಸುವಲ್ಲಿ ಮತ್ತು ದಷ್ಟಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗ್ಲಾಕೋಮಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ತಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಔಷಧಿಯನ್ನು ತಪ್ಪದೇ ಹಾಗೂ ದೀರ್ಘಕಾಲ ಬಳಸುವುದು ತುಂಬಾ ಮುಖ್ಯ.

                          ಕಿಡ್ನಿ :ಕೇರ್‌ಫುಲ್ ಆಗಿರಿ:-

ಕಿಡ್ನಿ ಒಂದು ಫಿಲ್ಟರ್ ಇದ್ದಂತೆ. ಸರಿಯಾಗಿ ಕಾಪಾಡಿಕೊಂಡ್ರೆ ದೇಹದ ಆರೋಗ್ಯಕ್ಕೆ ಹಿತ. ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ, ದೇಹದಲ್ಲಿ ಟಾಕ್ಸಿನ್ ಆಂಶ ಹೆಚ್ಚಿ ಅನಾರೋಗ್ಯ ಉಂಟಾಗುತ್ತದೆ. ಹಾಗೇ ಮುಂದುವರೆದರೆ ಮೂತ್ರಪಿಂಡ ವೈಫಲ್ಯ ಉಂಟಾಗಬಹುದು.

ಸಾವಿನಂಚಿನತ್ತ ಸಾಗುತ್ತೇವೆ. ಈ ಅವಸ್ಥೆಯನ್ನೇ ವೈದ್ಯಕೀಯ ಭಾಷೆಯಲ್ಲಿ ಸಿಕೆಡಿ (ಕ್ರಾನಿಕ್ ಕಿಡ್ನಿ ಡಿಸೀಸ್) ಎನ್ನುತ್ತಾರೆ.

ಏನಿದು ಸಿಕೆಡಿ?
ಸಿಕೆಡಿಯನ್ನು ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆ ಎಂದೂ ಕರೆಯುತ್ತಾರೆ. ಈ ಲಕ್ಷಣಗಳಲ್ಲಿ ಮೂತ್ರಪಿಂಡದ ಕಾರ್ಯಕ್ಷಮತೆ ಕೆಲ ತಿಂಗಳು ಅಥವಾ ವರ್ಷಗಳಲ್ಲಿ ಕುಂದುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಹಸಿವು ಕಡಿಮೆಯಾಗುತ್ತದೆ. ಮೂತ್ರಪಿಂಡದ ತೊಂದರೆಗಳು ಹೆಚ್ಚಾಗಿ ಅಧಿಕ ರಕ್ತದ ಒತ್ತಡದ ಅಥವಾ ಮಧುಮೇಹಿಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ಅವರಲ್ಲಿ ಹೃದಯ ಸಂಬಂಧಿ ಕಾಯಿಲೆ, ರಕ್ತ ಹೀನತೆ ಅಥವಾ ಪೆರಿಕಾರ್ಡಿಟಿಸ್ ಲಕ್ಷಣಗಳು ಕಂಡುಬರುತ್ತದೆ.

ಪತ್ತೆ ಹೇಗೆ?
ರಕ್ತದಲ್ಲಿ ಕ್ರಿಯಾಟಿನಿನ್ ಅಂಶ ಪತ್ತೆ ಹಚ್ಚುವ ಮೂಲಕ ಸಿಕೆಡಿಯನ್ನು ಪತ್ತೆ ಮಾಡಬಹುದು. ಸಿಕೆಡಿಯ ಪ್ರಾರಂಭಿಕ ಹಂತದಲ್ಲಿ ಕ್ರಿಯಾಟಿನಿನ್ ಮಟ್ಟ ಕಡಿಮೆ ಇರುತ್ತದೆ. ಅದನ್ನು ಮೂತ್ರ ವಿಶ್ಲೇಷಣಾ (ಯೂರಿ ನ್ ಅನಾಲಿಸಿಸ್) ಪರೀಕ್ಷೆಯಿಂದ ಪತ್ತೆ ಹಚ್ಚಬಹುದು. ಈ ಪರೀಕ್ಷೆಯಿಂದ ಕಿಡ್ನಿಯ ದೆಸೆಯಿಂದ ಪ್ರೋಟೀನ್ ಹಾಗೂ ಕೆಂಪು ರಕ್ತ ಕಣಗಳು ಕಡಿಮೆಯಾಗಿರುವ ಅಂಶ ಪತ್ತೆಯಾಗುತ್ತದೆ. ಕ್ರಿಯಾಟಿನಿನ್ ಮಟ್ಟ ಹೆಚ್ಚಿದಂತೆಲ್ಲಾ ಮಲಿನ ವಸ್ತುಗಳನ್ನು ಹೊರ ಹಾಕುವ ಕಿಡ್ನಿಯ ಪ್ರಕ್ರಿಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಡಾ.ಬಾಲಾಜಿ ವೆಂಕಟೇಶ್.

ಸಿಕೆಡಿಯ ತೀವ್ರತೆಯನ್ನು ಪತ್ತೆ ಹಚ್ಚಲು ಮೆಡಿಕಲ್ ಇಮೇಜಿಂಗ್ ಮಾಡುವ ಪ್ರಕ್ರಿಯೆಯೂ ಚಾಲನೆಯಲ್ಲಿದೆ. ಕೆಲವೊಂದು ಸನ್ನಿವೇಶದಲ್ಲಿ ರೀನಲ್ ಬಯಾಪ್ಸಿ (ಮೂತ್ರಪಿಂಡದ ಸ್ವಲ್ಪ ಭಾಗವನ್ನು ತೆಗೆದು ಮಾಡುವ ಪರೀಕ್ಷೆ) ಯನ್ನೂ ಮಾಡುತ್ತಾರೆ. ಸಿಕೆಡಿಯಲ್ಲಿ ಐದು ಘಟ್ಟಗಳಿವೆ. ಸ್ಟೇಜ್-1 ಸಾಧಾರಣವಾಗಿದ್ದು ಕೆಲ ಲಕ್ಷಣಗಳು ಮಾತ್ರ ಕಾಣುತ್ತದೆ. ಆದರೆ ಸ್ಟೇಜ್ 5ನ್ನು ಮಾರಣಾಂತಿಕವೆಂದು ಬಣ್ಣಿಸಲಾಗುತ್ತದೆ. ಸ್ಟೇಜ್ 5 ಸಿಕೆಡಿಯನ್ನು ಇಎಸ್‌ಆರ್‌ಡಿ (ಕೊನೆ ಹಂತದ ಮೂತ್ರಪಿಂಡದ ಕಾಯಿಲೆ) ಎನ್ನುವುದೂ ಉಂಟು.

ಕಾರಣ
ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವರಲ್ಲಿ ಹಾಗೂ ಕುಡಿತ, ಧೂಮಪಾನ, ಡ್ರಗ್ಸ್ ಚಟ, ಡಿಹೈಡ್ರೇಷನ್, ಸುದೀರ್ಘಕಾಲದಿಂದ ರಕ್ತದೊತ್ತಡ ಮುಂತಾದ ಕಾಯಿಲೆಯಿಂದ ನರಳುತ್ತಿದ್ದರೆ, ರಕ್ತದ ಚಲನೆಯಲ್ಲಿ ಏರುಪೇರು ಆಗುತ್ತಿದ್ದರೆ, ದೇಹಕ್ಕೆ ಅಗತ್ಯ ಇರುವಷ್ಟು (8 ರಿಂದ 10 ಲೀಟರ್) ನೀರನ್ನು ಸೇವಿಸದೇ ಇದ್ದರೆ ಮೂತ್ರಪಿಂಡದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಒಂದು ಅಂದಾಜಿನಂತೆ, ಭಾರತದಲ್ಲಿ ಶೇ.12-15ರಷ್ಟು ವಯಸ್ಕರು ಒಂದಲ್ಲಾ ಒಂದು ಬಗೆಯ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದಾರೆ. ಅದಕ್ಕೆ ಅಸಮರ್ಪಕ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆಯೇ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಆರೋಗ್ಯಕರ ಜೀವನವೇ ಆಧಾರ
ಸಿಕೆಡಿ ರೋಗಿಯನ್ನು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದತ್ತ ಒಯ್ಯುತ್ತದೆ. ಇಂತಹ ಲಕ್ಷಣಗಳು ಶೇ.75ರಷ್ಟು ವಯಸ್ಕರಲ್ಲಿ ಕಾಣುತ್ತದೆ. ನೀವು ಆರೋಗ್ಯವಂತರಾಗಿ ಇರಬೇಕು ಅಂದ್ರೆ ಮೊದಲು ಕಿಡ್ನಿಯತ್ತ ಕಾಳಜಿ ಹರಿಸಬೇಕು. ಅದಕ್ಕಾಗಿ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಆಹಾರ ಸೇವನೆ, ಶಾರೀರಿಕ ವ್ಯಾಯಾಮ, ಯೋಗಾಭ್ಯಾಸ, ಜಿಮ್‌ಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ವಿಪರೀತವಾಗಿ ಒತ್ತಡ ಮಾಡಿಕೊಳ್ಳುವುದು, ಅತಿಯಾಗಿ ತಿಂದು ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳೋದು ಸರಿಯಲ್ಲ. ಆಹಾರ, ಆಚಾರ, ವಿಚಾರದಲ್ಲಿ ಸಮತೋಲನ ಸಾಧಿಸಬೇಕು. ನೀರನ್ನು ಹೆಚ್ಚಿಗೆ ಸೇವಿಸಬೇಕು. ಮೂತ್ರಪಿಂಡದ ಸಮಸ್ಯೆ ಇದ್ದರೆ ದ್ರವ ಆಹಾರದ ಪ್ರಮಾಣವನ್ನು ವೈದ್ಯರ ಸಲಹೆಯಂತೇ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮೂತ್ರಪಿಂಡದ ಮೇಲೆ ಅನವಶ್ಯ ಒತ್ತಡ ಹಾಕುತ್ತೇವೆ ಎನ್ನುತ್ತಾರೆ ಡಾ.ಮುಕುಂದರಾವ್.

ಮೂತ್ರಪಿಂಡ ಕಾಯಿಲೆಗೆ ವಯೋಮಿತಿ ಇಲ್ಲ. ಮೂತ್ರಪಿಂಡ ವೈಫಲ್ಯತೆಗೆ ಅನುವಂಶೀಕತೆ, ಜನನ ಸಂದರ್ಭದ ನ್ಯೂನತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಅಂಶಗಳು ಕಾರಣವಾಗುತ್ತವೆ. ಹಾಗಾಗಿ ಮಧುಮೇಹ, ರಕ್ತದೊತ್ತಡ, ಅನುವಂಶೀಯ ಕಾಯಿಲೆಗಳಿಂದ ನರಳುತ್ತಿರುವರು ಆದಷ್ಟು ಜಾಗರೂಕರಾಗಿರಬೇಕು.
***

ಮೂತ್ರಪಿಂಡ ಸಮಸ್ಯೆಯಿಂದ ದೂರವಿರಿ
* ಬೀಡಿ, ಸಿಗರೇಟು, ಮದ್ಯದಿಂದ ದೂರವಿರಿ,

* ದಿನಂಪ್ರತಿ 7 ರಿಂದ 8 ಲೀಟರ್‌ನಷ್ಟು ನೀರು ಕುಡಿಯಿರಿ.

* ಸಾತ್ವಿಕ ಆಹಾರವನ್ನೇ ಸೇವಿಸಿ, ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನಿ.

* ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಿ, ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಸೇವನೆ ಕಡಿಮೆ ಮಾಡಿ, ಕರಿದ ಹಾಗೂ ಮಸಾಲೆ ಪದಾರ್ಥಗಳನ್ನು ವರ್ಜಿಸಿ.

* ನಿಯಮಿತ ವ್ಯಾಯಾಮ ಜೀವನದ ಅಂಗವಾಗಲಿ, ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಪೀಡಿತರು ಆಗಾಗ್ಗೆ ರಕ್ತ, ಮೂತ್ರದಲ್ಲಿನ ಸಕ್ಕರೆ ಪ್ರಮಾಣವನ್ನು ಪರಿಶೀಲಿಸಿಕೊಳ್ಳಿ.

* ಮಜ್ಜಿಗೆ, ತಾಜಾ ಮೊಸರು, ಆಕಳ ಹಾಲು, ಪಪ್ಪಾಯಿ, ಸೇಬು, ಸಿಹಿ ಮಾವಿನಹಣ್ಣು, ಬಾಳೆಹಣ್ಣು, ನುಗ್ಗೆಕಾಯಿ, ಹುರುಳಿಕಾಯಿ, ಪರಂಗಿ ಕಾಯಿ, ಕ್ಯಾರೆಟ್, ಎಳನೀರು, ಬಾರ‌್ಲಿ ನೀರು ಹೆಚ್ಚು ಬಳಸಿ.

* ಬಟಾಣಿ, ಉದ್ದಿನ ಬೇಳೆ, ಆಲೂಗಡ್ಡೆ, ಎಲೆಕೋಸು, ಬಸಲೆ, ಲವಣ, ಬದನೆಕಾಯಿ, ಹುಳಿ ಮೊಸರು, ಕೆಂಪು ಮತ್ತು ಹಸಿರು ಮೆಣಸಿನಕಾಯಿ, ಹುಳಿ ಪದಾರ್ಥಗಳು, ಮಾಂಸ ಮತ್ತು ಮದ್ಯದಿಂದ ಸಾಧ್ಯವಾದಷ್ಟು ದೂರವಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ