ಮಂಗಳವಾರ, ಏಪ್ರಿಲ್ 23, 2013

ಅನ್ಯಗ್ರಹ ಜೀವಿಗಳಿವೆಯೆ?


ಅನ್ಯಗ್ರಹ ಜೀವಿಗಳಿವೆಯೆ?


ಮೊದಲಿನಿಂದಲೂ ಮಾನವನನ್ನು ಒಂದು ರೀತಿಯ ವಿಚಿತ್ರದ ಒಂಟಿತನ ಕಾಡುತ್ತಿದೆ. ಅವನಲ್ಲಿನ ವೈಜ್ಞಾನಿಕ ಅರಿವು ಹೆಚ್ಚಿದಂತೆ ಅವನ ಕುತೂಹಲವೂ ಬೆಳೆಯುತ್ತಿದೆ. ಈ ವಿಶ್ವ ಅನಂತವಾದುದೂ ಹಾಗೂ ಅದರಲ್ಲಿ ಕೋಟಿ ಕೋಟಿಗಟ್ಟಲೆ ನಕ್ಷತ್ರಗಳೂ, ನಮ್ಮ ಭೂಮಿಯಂತಹ ಲೆಕ್ಕವಿಡಲಾಗದಷ್ಟು ಗ್ರಹಗಳಿವೆ ಎಂದು ತಿಳಿದ ನಂತರವಂತೂ ಅವನ ಒಂಟಿತನ ಇನ್ನೂ ಹೆಚ್ಚಾಗಿದೆ. ಈ ಅನಂತ ಅಖಂಡ ವಿಶ್ವದಲ್ಲಿ ಧೂಳಿನ ಕಣದಂತಹ ಈ ಭೂಮಿಯ ಮೇಲೆ ಮಾತ್ರ ನಾಗರಿಕತೆ ಇದೆಯೆ? ಅಥವಾ ಹಲವಾರು ಕೋಟಿ ಗ್ರಹಗಳ ಮೇಲೆ ಮಾನವನಿಗಿಂತಲೂ ಹೆಚ್ಚಿಗೆ ಬುದ್ಧಿವಂತರಾಗಿರುವ, ತಾಂತ್ರಿಕತೆ, ವಿಜ್ಞಾನದಲ್ಲಿ ಅಭಿವೃದ್ಧಿ ಹೊಂದಿರುವ ಜೀವಿಗಳಿರಬಹುದೆ? ಅಥವಾ ಈ ವಿಶ್ವದಲ್ಲಿ ಮಾನವ ಒಬ್ಬಂಟಿಯೆ? ಈ ವಿಶ್ವದಲ್ಲಿ ಇತರ ನಾಗರಿಕತೆಗಳು ಇವೆಯೆ? ಈ ಪ್ರಶ್ನೆ ಶತಶತಮಾನಗಳಿಂದ ಮಾನವನನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಇಂದಿಗೂ ಸಮರ್ಪಕ ಉತ್ತರ ದೊರೆತಿಲ್ಲ.

ಮಾನವ ಮೊದಲಿನಿಂದಲೂ ಕುತೂಹಲಜೀವಿ. ಅವನು ಕುತೂಹಲದಿಂದ ಅರಸದ ಸ್ಥಳವೇ ಇಲ್ಲ. ವಿಜ್ಞಾನ ಬೆಳೆದಂತೆ ಮಾನವ ವಿಶ್ವದಲ್ಲಿ ಇನ್ನಿತರೆಡೆ ಜೀವಿಗಳಿರಬಹುದೇ ಎಂಬ ತನ್ನ ಹುಡುಕಾಟವನ್ನು ಆರಂಭಿಸಿದ್ದಾನೆ. 'ನ್ಯಾಸಾ'ದ ವಿಜ್ಞಾನಿ ದಿವಂಗತ ಕಾರ್ಲ್ ಸಾಗನ್ ಹೇಳಿದ್ದಂತೆ ಮಾನವನ ಈ ರೀತಿಯ ಪ್ರಯತ್ನ ಒಂದು ರೀತಿಯಲ್ಲಿ ಅವನದೇ ಮೂಲಗಳ ಹುಡುಕಾಟದ ಪ್ರಯತ್ನ.
ನಮ್ಮ ಸೌರವ್ಯೂಹದ ಹೊರಗೂ ಇತರ ಗ್ರಹಗಳಿವೆ ಎಂದು ಖಾತ್ರಿಯಾದ ಮೇಲೆ ಮಾನವನ ಅನ್ವೇಷಣೆಯ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಸೂರ್ಯನಂತಹುದೇ ಮೂರು ಡಜನಿಗಿಂತ ಹೆಚ್ಚು ನಕ್ಷತ್ರಗಳಿಗೆ ಗುರು ಗ್ರಹದ ದ್ರವ್ಯರಾಶಿ ಹೊಂದಿರುವ ಗ್ರಹಗಳು ಪತ್ತೆಯಾಗಿದ್ದು ಅವುಗಳ ನಡುವೆ ಭೂಮಿಯಂತಹುದೇ ಗ್ರಹಗಳೂ ಇರುವ ಸಾಧ್ಯತೆಗಳಿವೆ. ಭೂಮಿಯ ಮೇಲಿನ ಜೀವವಿಕಾಸದ ಚರಿತ್ರೆಯನ್ನು ಅಧ್ಯಯನ ಮಾಡಿರುವ ವಿಜ್ಞಾನಿಗಳು ಜೀವವಿಕಾಸ ವಿಶ್ವದ ಇತರೆಡೆಯೂ ಏಕಾಗಿರಬಾರದು ಎನ್ನುತ್ತಾರೆ. ಭೌಗೋಳಿಕ ಸಮಯದ ಲೆಕ್ಕದಲ್ಲಿ ಭೂಮಿಯ ಮೇಲೆ ಜೀವವಿಕಾಸ ಅತ್ಯಂತ ಕ್ಷಿಪ್ರವಾಗಿಯೇ ಆಗಿದೆ. ಭೂಮಿಯ ಮೇಲೆ ದೊರಕಿರುವ ಜೀವದ ಅತ್ಯಂತ ಪುರಾತನ ಪುರಾವೆಯೆಂದರೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ದೊರಕಿರುವ 3.5 ಬಿಲಿಯನ್ ವರ್ಷಗಳ ಹಿಂದಿನ ಶಿಲೆಗಳಲ್ಲಿನ ಬ್ಯಾಕ್ಟೀರಿಯಾಗಳ ಪಳೆಯುಳಿಕೆಗಳು. ಈ ಬ್ಯಾಕ್ಟೀರಿಯಾಗಳು ಅತ್ಯಂತ ಅಭಿವೃದ್ಧಿ ಹೊಂದಿರುವುದಾಗಿರುವುದರಿಂದ ಅವೂ ಸಹ ಸುದೀರ್ಘ ವಿಕಾಸದ ಹಂತಗಳನ್ನು ಹಾದು ಬಂದಿವೆ. ಅಂದರೆ ವಿಜ್ಞಾನಿಗಳ ಪ್ರಕಾರ ಭೂಮಿಯ ಮೇಲೆ ಜೀವ ವಿಕಾಸ ಸುಮಾರು ನಾಲ್ಕು ಬಿಲಿಯನ್ ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. ಭೂಮಿಯ ಈಗಿನ ವಯಸ್ಸು 4.6 ಬಿಲಿಯನ್ ವರ್ಷಗಳಷ್ಟಾಗಿರುವುದರಿಂದ ಭೂಮಿ ರಚನೆಯಾದ ಅತಿ ಶೀಘ್ರದಲ್ಲೇ ಇಲ್ಲಿ ಜೀವವಿಕಾಸ ಪ್ರಾರಂಭವಾಗಿದೆ. ಜೀವದ ಸೃಷ್ಟಿ ಮತ್ತು ವಿಕಾಸಕ್ಕೆ ಗ್ರಹಗಳು ಮತ್ತು ಅವುಗಳಲ್ಲಿ ಭೂಮಿಯಂತಹ ಪರಿಸರ ಅವಶ್ಯಕವಿದೆ ಎನ್ನುವುದಾದಲ್ಲಿ ವಿಶ್ವದಾದ್ಯಂತ ಜೀವವಿಕಾಸವಾಗಿರುವ ಸಾಧ್ಯತೆಗಳಿವೆ. ಅದರಿಂದಾಗಿಯೇ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಕ್ರಿಶ್ಚಿಯನ್ ಡೆ ದುವೆ, `ನಮ್ಮ ಭೂಮಿಯ ಮೇಲೆ ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಇದ್ದಂತಹ ಭೌತಿಕ ಪರಿಸ್ಥಿತಿಗಳು ಇರುವೆಡೆಯೆಲ್ಲೆಲ್ಲಾ ಜೀವ ವಿಕಾಸ ಆಗೇ ಇರುತ್ತದೆ' ಎಂದಿದ್ದಾರೆ. ಹಾಗಾದರೆ ಈ ವಿಶ್ವದಲ್ಲಿ ಅಸಂಖ್ಯಾತ ಜೀವಿಗಳಿವೆ ಎಂದು ನಂಬಲು ಕಾರಣವೂ ಇದ್ದಂತಾಗಿದೆ. ಜೀವಿಗಳು ಇದ್ದಲ್ಲಿ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ನಾಗರಿಕತೆಗಳೂ ಇವೆಯೆಂದು ಅರ್ಥವೆ?

ಕೆಲವು ವಿಜ್ಞಾನಿಗಳ ಪ್ರಕಾರ ಆದಿಮ ಜೀವ ಒಮ್ಮೆ ವಿಕಾಸವಾಯಿತೆಂದರೆ ಅದು ಪ್ರಾಕೃತಿಕ ಆಯ್ಕೆಯ (Natural Selection) ಮೂಲಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದೆಡೆಗೆ ವಿಕಾಸ ಹೊಂದಲೇಬೇಕು. ಹಾಗಾದರೆ ಅಂತಹ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ಅನ್ಯಗ್ರಹ ವಾಸಿಗಳು ಇರುವುದಾದಲ್ಲಿ ಅವರೇಕೆ ನಮಗೆ ಕಾಣಿಸಿಕೊಂಡಿಲ್ಲ? ವಿಜ್ಞಾನಿಗಳಾದ ಫ್ರಾಂಕ್ ಡ್ರೇಕ್ ಮತ್ತು ಕಾರ್ಲ್ ಸಾಗನ್ರವರು ನಮ್ಮ ಆಕಾಶಗಂಗೆಯಲ್ಲಿರಬಹುದಾದ ಅಭಿವೃದ್ಧಿಹೊಂದಿದ ನಾಗರಿಕತೆಗಳ ಸಂಖ್ಯೆಯನ್ನು ಅಂದಾಜುಮಾಡಲು 1976ರಲ್ಲೇ ಸಮೀಕರಣವೊಂದನ್ನು ರಚಿಸಿದರು (ಅದನ್ನು ಡ್ರೇಕ್ ಸಮೀಕರಣ ಎನ್ನುತ್ತಾರೆ). ಆ ಸಮೀಕರಣವನ್ನು ಆಕಾಶಗಂಗೆಯಲ್ಲಿರಬಹುದಾದ ಗ್ರಹಗಳ ಸಂಖ್ಯೆಯ ಅಂದಾಜು, ಆ ಗ್ರಹಗಳಲ್ಲಿ ಜೀವಿಗಳಿಗೆ ಆಸರೆ ನೀಡಬಹುದಾದಂತಹ ಗ್ರಹಗಳ ಶೇಕಡಾವಾರು ಹಾಗೂ ಅಂಥ ಗ್ರಹಗಳಲ್ಲಿ ಜೀವರಾಶಿಯನ್ನು ಹೊಂದಿದ್ದು ಅವು ತಾಂತ್ರಿಕವಾಗಿ ಮುಂದುವರಿದಿರಬಹುದಾದ ಗ್ರಹಗಳ ಶೇಕಡಾವಾರನ್ನು ಒಳಗೊಂಡಿತ್ತು. ಆಗಿನ ಅವರ ವೈಜ್ಞಾನಿಕ ಲೆಕ್ಕಾಚಾರದ ಪ್ರಕಾರ ನಮ್ಮದೇ ಹಾಲುಹಾದಿ ಆಕಾಶಗಂಗೆಯಲ್ಲಿ ಕಾರ್ಲ್ ಸಾಗನ್ರವರ ಅಂದಾಜಿನ ಪ್ರಕಾರ ಹತ್ತು ಲಕ್ಷ ನಾಗರಿಕತೆಗಳಿರಬಹುದು.

ಕೆಲವರ ಅಂದಾಜಿನ ಪ್ರಕಾರ ಈ ವಿಶ್ವದಲ್ಲಿ ಸುಮಾರು ಹತ್ತು ಲಕ್ಷ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಾಗರಿಕತೆಗಳಿರಬಹುದು. ಹತ್ತು ಲಕ್ಷ ಎನ್ನುವುದು ಊಹೆಯ ಅತಿರೇಕ ಎನ್ನಿಸಿದರೂ, ಈ ಅಗಾಧ ಅನಂತ ವಿಶ್ವಕ್ಕೆ ಹೋಲಿಸಿದರೆ ಈ ಹತ್ತು ಲಕ್ಷದ ಸಂಖ್ಯೆ ಅತಿಯೇನಲ್ಲ. ಏಕೆಂದರೆ, ನಮ್ಮ ಭೂಮಿಯಿರುವ ಹಾಲು ಹಾದಿ ಆಕಾಶಗಂಗೆಯಲ್ಲಿಯೇ (Milky Way Galaxy) ಸುಮಾರು ಹತ್ತು ಸಾವಿರ ಕೋಟಿ ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರವೂ ಸಹ ನಮ್ಮ ಸೂರ್ಯನಂತಹುದೇ- ಅದಕ್ಕಿಂತ ಹಿರಿದಾದ ಅಥವಾ ಕಿರಿದಾದ ನಕ್ಷತ್ರಗಳು. ಅಲ್ಲದೆ ವಿಜ್ಞಾನಿಗಳ ಲೆಕ್ಕಾಚಾರಗಳ ಪ್ರಕಾರ ಈ ವಿಶ್ವದಲ್ಲಿ ಈ ತರಹೆಯ ಹತ್ತು ಸಾವಿರ ಕೋಟಿ ಆಕಾಶಗಂಗೆಗಳಿರಬಹುದು!! ಈ ರೀತಿಯ ನಮ್ಮ ಊಹೆಗೂ ನಿಲುಕದ ಅಸಂಖ್ಯ ನಕ್ಷತ್ರಗಳ ಗ್ರಹಗಳಲ್ಲಿ ಜೀವಿಗಳ ಅನ್ವೇಷಣೆ ನಡೆಸುವುದು ಸಾಗರದಲ್ಲಿ ಒಂದು ಸೂಜಿಯನ್ನು ಹುಡುಕಿದಷ್ಟೇ ಕಷ್ಟವಾದುದು. ನಾವು ಅನ್ವೇಷಿಸುತ್ತಿರುವ ನಮ್ಮ ಆಕಾಶಗಂಗೆಯಲ್ಲಿನ ಹತ್ತಿರದ ನಕ್ಷತ್ರ ಎಂದರೆ ಆ ಆಕಾಶಗಂಗೆಯ ವಿಸ್ತಾರದಲ್ಲಿ ಅದು ನಮ್ಮಿಂದ ಕೇವಲ ಶೇ.1ರಷ್ಟು ದೂರ ಮಾತ್ರವಿದೆ.

ನಮ್ಮ ಸೌರವ್ಯೂಹವಿರುವ ಹಾಲು ಹಾದಿ ಆಕಾಶಗಂಗೆ

ಕಳೆದ ಕೆಲವು ದಶಕಗಳಿಂದೀಚೆಗೆ ವಿಜ್ಞಾನ ಜಗತ್ತಿನಲ್ಲಾಗಿರುವ ಸಾಧನೆಗಳಿಂದ ಅದರಲ್ಲೂ ಬಾಹ್ಯಾಕಾಶ ವಿಜ್ಞಾನದಲ್ಲಿ 'ರೇಡಿಯೋ ಅಸ್ಟ್ರಾನಮಿ'ಯ ಅವಿಷ್ಕಾರದಿಂದಾಗಿ ಈ ವಿಶ್ವಕ್ಕೇ ಒಂದು ಕಿಟಕಿಯನ್ನು ತೆರೆದಂತಾಗಿದೆ. ಅದರ ಮೂಲಕ ನಾವು ವಿಶ್ವದ ಇನ್ನಿತರೆಡೆಗೆ ಸಂದೇಶಗಳನ್ನು ಕಳುಹಿಸಲು ಹಾಗೂ ವಿಶ್ವದ ಇನ್ನಿತರೆಡೆಗಳಿಂದ ಬರಬಹುದಾದ ಸಂದೇಶಗಳನ್ನು ಆಲಿಸಲು ಸಾಧ್ಯವಾಗುತ್ತದೆ. ರೇಡಿಯೋ ಸಂಕೇತಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ. ವಿಶ್ವದ ಇನ್ನಿತರೆಡೆ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಾಗರಿಕತೆಗಳಿದ್ದಲ್ಲಿ ಅವರು ಈಗಾಗಲೇ ರೇಡಿಯೋ ವಿಜ್ಞಾನದ ಅವಿಷ್ಕಾರ ನಡೆಸೇ ಇರುತ್ತಾರೆ. ಇನ್ನೂ ಅಭಿವೃದ್ಧಿ ಹೊಂದಿದ ನಾಗರೀಕತೆಗಳಿದ್ದಲ್ಲಿ ಅವರು ಇತರ ಸಂಪರ್ಕ ವಿಧಾನಗಳನ್ನು ಅನುಸರಿಸಬಹುದು. ಆದರೆ ಒಂದು 'ಹಿಂದುಳಿದ ನಾಗರಿಕತೆ'ಯನ್ನು ಸಂಪರ್ಕಿಸಬೇಕಾದಲ್ಲಿ ರೇಡಿಯೋ ಸಂಕೇತಗಳನ್ನೇ ಕಳುಹಿಸಬೇಕಾಗುತ್ತದೆ.

ಅಕಸ್ಮಾತ್ ತಾಂತ್ರಿಕವಾಗಿ ಮುಂದುವರಿದ ಅನ್ಯಗ್ರಹ ಜೀವಿಗಳಿದ್ದಲ್ಲಿ ಅವು ನಮ್ಮನ್ನು ಹೇಗೆ ಸಂಪರ್ಕಿಸುತ್ತವೆ?
ವಿಶ್ವದ ಬೇರೆ ನಾಗರಿಕತೆಗಳಿಂದ ಬರಬಹುದಾದ ರೇಡಿಯೋ ಸಂಕೇತಗಳನ್ನು ಆಲಿಸುವ ಸಾಧ್ಯತೆಗಳ ಬಗೆಗೆ ಮೊಟ್ಟಮೊದಲ ಬಾರಿಗೆ ಭೌತಶಾಸ್ತ್ರಜ್ಞರಾದ ಗ್ಯುಸೆಪ್ ಕೊಕ್ಕೋನಿ ಮತ್ತು ಫಿಲಿಪ್ ಮೋರಿಸನ್ `ನೇಚರ್' ಪತ್ರಿಕೆಯಲ್ಲಿ 1956ರಲ್ಲಿ ಪ್ರಕಟವಾದ ತಮ್ಮ ಪ್ರಬಂಧದಲ್ಲಿ ಚರ್ಚಿಸಿದರು. ಅದರಂತೆಯೇ ಮೊದಲ ಪ್ರಯತ್ನ 1959 ಹಾಗೂ 1960ರಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ಅದನ್ನು 'ಪ್ರಾಜೆಕ್ಟ್ ಓಜ್ಮಾ' ಎಂದು ಕರೆದರು. 1992ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನ್ಯಾಸಾ' ಸಹ ಈ ರೇಡಿಯೋ ಸಂಕೇತಗಳನ್ನು ಆಲಿಸುವ ಬೃಹತ್ ಪ್ರಯತ್ನ ಆರಂಭಿಸಿತು. ಅದನ್ನು 'ಸೆಟಿ' (SETI = Search For Extra Terrestrial Intelligence) ಎಂದು ಕರೆದರು. ಅತಿ ದೊಡ್ಡ ಹಾಗೂ ಸೂಕ್ಷ್ಮ ರೇಡಿಯೋ ಟೆಲಿಸ್ಕೋಪ್ಗಳನ್ನು ಸ್ಥಾಪಿಸಿ ಅದರ ಮೂಲಕ ರೇಡಿಯೋ ಸಂಕೇತಗಳನ್ನು ಆಲಿಸುವ ಪ್ರಯತ್ನ ನಡೆಸಿದೆ. ಅಂಥದ್ದೊಂದು ಪ್ಯೋರ್ಟೊ ರಿಕೋದಲ್ಲಿ ಸ್ಥಾಪಿಸಿರುವ ರೇಡಿಯೋ ಟೆಲಿಸ್ಕೋಪ್ ವಿಶ್ವದಲ್ಲೇ ಅತಿ ದೊಡ್ಡದು ಹಾಗೂ ಅದು 1300 ಜ್ಯೋತಿರ್ವರ್ಷಗಳಷ್ಟು ದೂರ ಇರುವ ನಕ್ಷತ್ರಪುಂಜಗಳಿಂದಲೂ ಸಹ ಸಂಕೇತಗಳನ್ನು ಗ್ರಹಿಸಬಲ್ಲುದು (1 ಜ್ಯೋತಿರ್ವರ್ಷ ಎಂದರೆ ಬೆಳಕು ಸತತವಾಗಿ 1 ವರ್ಷ ಚಲಿಸುವ ದೂರ ಅಂದರೆ, 300000 ಕಿ.ಮೀ. x 365 ದಿನಗಳು x 24 ಗಂಟೆಗಳು x 60 ನಿಮಿಷಗಳು x 60 ಸೆಕೆಂಡುಗಳು = 9460800000000 ಕಿ.ಮೀ. 1300 ಜ್ಯೋತಿರ್ವರ್ಷ ಎಂದರೆ 1300 x 9460800000000 = 12299040000000000 ಕಿ.ಮೀ). ಆದರೆ ಇದುವರೆಗೂ ಯಾವುದೇ ರೇಡಿಯೋ ಸಂಕೇತಗಳನ್ನು ಗ್ರಹಿಸಲಾಗಿಲ್ಲ.
ಚಿತ್ರ 2: ನ್ಯಾಸಾದ `ಸೆಟಿ' ಕಾರ್ಯಕ್ರಮದ ರೇಡಿಯೋ ಟೆಲಿಸ್ಕೋಪ್ಗಳು

ಮಂಗಳ ಅಥವಾ ಚಂದ್ರಗ್ರಹದ ಮೇಲೆ ಜೀವಿಗಳಿವೆ ಎಂದು ನಂಬಿ ಅವುಗಳನ್ನು ಸಂಪರ್ಕಿಸುವ ಪ್ರಯತ್ನ 150 ವರ್ಷಗಳ ಹಿಂದೆಯೇ ನಡೆಯಿತು. ಜರ್ಮನಿಯ ಗಣಿತಶಾಸತ್ರಜ್ಞ ಕಾರ್ಲ್ ಗಾಸ್ (1777-1855) ಸೈಬೀರಿಯಾದಲ್ಲಿ ಪೈಥಾಗೊರಸ್ನ ಪ್ರಮೇಯದ ಯೂಕ್ಲಿಡ್ ನಿರೂಪಣೆಯನ್ನು ದೈತ್ಯಾಕಾರದಲ್ಲಿ ಚಿತ್ರರೂಪದಲ್ಲಿ ರಚಿಸಬೇಕೆಂಬ ಸಲಹೆ ನೀಡಿದ. ಅವುಗಳನ್ನು ತಮ್ಮ ದೂರದರ್ಶಕಗಳಲ್ಲಿ ನೋಡುವ ಸೆಲೆನೈಟರು (ಚಂದ್ರಗ್ರಹ ವಾಸಿಗಳು) ಅದನ್ನು ಯಾರೋ ಬುದ್ಧಿವಂತ ಜೀವಗಳು ರಚಿಸಿದ್ದಾರೆಂದು ತಿಳಿದು ನಮ್ಮೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಾರೆ ಎಂದು ತಿಳಿಸಿದ.

1869ರಲ್ಲಿ ಫ್ರೆಂಚ್ ವಿಚಾರವಾದಿ ಚಾರ್ಲ್ಸ್ ಕ್ರೋಸ್ ಪ್ಯಾರಾಬೊಲಾ ಕನ್ನಡಿಗಳನ್ನು ಬಳಸಿ ಶಕ್ತಿಯುತ ವಿದ್ಯುತ್ ಬೆಳಕನ್ನು ಮಂಗಳ ಅಥವಾ ಶುಕ್ರ ಗ್ರಹಗಳ ಮೇಲೆ ಕೇಂದ್ರೀಕರಿಸಿ ಅವುಗಳನ್ನು ಆನ್- ಆಫ್ ಮಾಡಿ ಸಂಕೇತಗಳ ಮೂಲಕ ಸಂದೇಶಗಳನ್ನು ಕಳುಹಿಸಬಹುದೆಂಬ ಸಲಹೆ ನೀಡಿದ.

1896ರಲ್ಲಿ ಖ್ಯಾತ ಜೀವವಿಕಾಸ ಸಿದ್ಧಾಂತದ ರೂವಾರಿ ಚಾಲ್ಸ್ ಡಾರ್ವಿನ್ನ ನೆಂಟನಾದ ಸರ್ ಫ್ರಾನ್ಸಿಸ್ ಗಾಲ್ಟನ್ ಅನ್ಯಗ್ರಹ ಜೀವಿಗಳನ್ನು ಸಂಪರ್ಕಿಸಲು ಗಣಿತಶಾಸ್ತ್ರ ಆಧಾರಿತ ಭಾಷೆಯೊಂದನ್ನು ಆತ ರೂಪಿಸಿರುವುದಾಗಿ ಲೇಖನವೊಂದನ್ನು ಪ್ರಕಟಿಸಿದ.
1920ರ ದಶಕದಲ್ಲಿ ಮಂಗಳ ಗ್ರಹದಲ್ಲಿ ನಾಗರಿಕತೆ ಇದೆಯೆಂದು ಖಡಾಖಂಡಿತವಾಗಿ ನಂಬಿದ್ದ ಹಲವಾರು ವಿಜ್ಞಾನಿಗಳು ಅವರನ್ನು ಸಂಪರ್ಕಿಸುವ ಬಗ್ಗೆ ಯೋಜಿಸಿದರು. ರೇಡಿಯೋ ಪರಿಣಿತರಾದ ನಿಕೊಲಾ ಟೆಸ್ಲಾ, ಮಾರ್ಕೋನಿ ಮತ್ತು ಡೇವಿಡ್ ಟಾಡ್ ಮುಂತಾದವರು ಮೊದಲಿಗೆ ರೇಡಿಯೋ ತರಂಗಗಳನ್ನು ಬಳಸುವ ಬಗ್ಗೆ ಚಿಂತಿಸಿದರು. ಮಾರ್ಕೋನಿ ತನ್ನ ರೇಡಿಯೋ ಸಲಕರಣೆಯಲ್ಲಿ ಆಗಾಗ ವಿಚಿತ್ರ ಶಬ್ದಗಳನ್ನು ಆಲಿಸುತ್ತಿದ್ದು ಅದು ಬೇರೆ ಗ್ರಹದಿಂದ ಬರುತ್ತಿರುವ ಸಂದೇಶವೇ ಆಗಿದೆ ಎಂದು ನಂಬಿದ್ದಾನೆ ಎಂದು 1920, ಜನವರಿ 27ರ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ಮಂಗಳ ಮತ್ತು ಇತರ ಗ್ರಹಗಳಲ್ಲಿ ಜೀವಿಗಳಿರಬಹುದೆಂದು ಆಲ್ಬರ್ಟ್ ಐನ್ಸ್ಟೈನ್ ಸಹ ನಂಬಿದ್ದರಂತೆ!

1960ರಲ್ಲಿ ಡಚ್ ಗಣಿತಶಾಸ್ತ್ರಜ್ಞ ಹ್ಯಾನ್ಸ್ ಫ್ರಾಯ್ಡೆಂತಲ್ ಗಣಿತ ತತ್ವಗಳಾಧಾರಿತ ಭಾಷೆಯೊಂದನ್ನು ಅಭಿವೃದ್ಧಿಪಡಿಸಿ ಅದನ್ನು `ಲಿಂಕೋಸ್' (ಲಿಂಗ್ವಾ ಕಾಸ್ಮಿಕಾ) ಎಂದು ಕರೆದು ಅದರ ಮೂಲಕ ಸಮಯ, ಆಕಾಶ, ದ್ರವ್ಯರಾಶಿ ಮತ್ತು ಚಲನೆಯ ತತ್ವಗಳನ್ನು ಅನ್ಯಗ್ರಹ ಜೀವಿಗಳೊಂದಿಗೆ ವಿನಿಮಯ ಮಾಡಿಕೊಳ್ಳಬೇಕೆಂದು ತಿಳಿಸಿದ.

`ಸೆಟಿ'ಯ ಸಂಶೋಧಕರ ಪ್ರಕಾರ ನಮ್ಮ ಭೂಮಿ ಮತ್ತು ಇತರ ಸೌರವ್ಯೂಹದ ಗ್ರಹಗಳಿಗೆ ಅನ್ವಯಿಸುವ ಭೌತಿಕ ನಿಯಮಗಳು ಇಡೀ ವಿಶ್ವಕ್ಕೇ ಅನ್ವಯಿಸುತ್ತದೆ. ಹಾಗಿರುವಾಗ ನಾವು ಇತರ ಅನ್ಯಗ್ರಹ ಜೀವಿಗಳನ್ನು ಗಣಿತ, ಭೌತಶಾಸ್ತ್ರ, ರಾಸಾಯನಶಾಸ್ತ್ರ ಮುಂತಾದವುಗಳ ಮೂಲಭೂತ ತತ್ವಗಳ ಮೂಲಕವೇ ಸಂಪರ್ಕಿಸಬಹುದು. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲ. ಪಿಟ್ಸ್ಬರ್ಗ್ ವಿಶ್ವವಿದ್ಯಾನಿಲಯದ ನಿಕೊಲಾಸ್ ರೆಶ್ಚೆರ್ ಎಂಬ ತತ್ವಶಾಸ್ತ್ರದ ವಿದ್ವಾಂಸರ ಪ್ರಕಾರ ಅನ್ಯಗ್ರಹ ಜೀವಿಗಳ ಅವಶ್ಯಕತೆಗಳು, ಇಂದ್ರಿಯಗಳು ಮತ್ತು ನಡತೆ ನಮಗಿಂತ ವಿಭಿನ್ನವಾಗಿಯೇ ಇರಬಹುದು. ಆ ಜೀವಿಗಳು ಎಲ್ಲಾ ಸಾರ್ವತ್ರಿಕ ನಿಯಮಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರೂ ನಮ್ಮಲ್ಲಿನ ವಿಜ್ಞಾನದಂತೆಯೇ ಅವರದೂ ಇರಲೇಬೇಕೆಂದೇನೂ ಇಲ್ಲ. ಕೃತಕ ಬುದ್ಧಿಮತ್ತೆಯ ತಜ್ಞ ಮಾರ್ವಿನ್ ಮಿನ್ಸ್ಕಿ ಹೇಳುವಂತೆ ಅನ್ಯಗ್ರಹ ಜೀವಿಗಳು ಅವು ಹೇಗೇ ವಿಕಾಸ ಹೊಂದಿರಲಿ, ಅವು ನಮ್ಮಂತೆಯೇ ಆಲೋಚಿಸುತ್ತವೆ ಎನ್ನುತ್ತಾರೆ. ಏಕೆಂದರೆ, ಅವೂ ಸಹ ನಮ್ಮಂತೆಯೇ ಸ್ಥಳ, ಸಮಯ ಮತ್ತು ಸಂಪನ್ಮೂಲಗಳಂತಹ ಪರಿಮಿತವಾಗಿರುವ ಸಮಸ್ಯೆಗಳನ್ನೇ ಎದುರಿಸಬೇಕಾಗಿರುತ್ತವೆ. ಅವುಗಳನ್ನು ನಿಭಾಯಿಸಲು ನಾವು ಕಂಡುಕೊಂಡಂತಹ ಮೂಲಭೂತ ವಿಧಾನಗಳನ್ನೇ ಅವೂ ಸಹ ಅನುಸರಿಸಬೇಕಾಗುತ್ತದೆ. ಹಾಗಾಗಿ ಅನ್ಯಗ್ರಹ ಜೀವಿಗಳೂ ಸಹ ನಾವು ಗ್ರಹಿಸಬಲ್ಲ ಚಿಂತನಾ ಕ್ರಮ ಮತ್ತು ಸಂಪರ್ಕ ವಿಧಾನಗಳನ್ನೇ ಅಭಿವೃದ್ಧಿಪಡಿಸಿಕೊಂಡಿರುತ್ತವೆ ಎನ್ನುತ್ತಾರೆ. ಇವುಗಳ ಹಿನ್ನೆಲೆಯಲ್ಲಿ ಗಣಿತಶಾಸ್ತ್ರ ಎಲ್ಲಾ ಭಾಷೆಯ ಮತ್ತು ಸಾಂಸ್ಕೃತಿಕ ಗಡಿಗಳನ್ನೂ ಮೀರಿ `ಸಾರ್ವತ್ರಿಕ ಗ್ರಹಿಕೆ'ಯ ಸಂಪರ್ಕಸಾಧನವಾಗಬಹುದು ಎನ್ನುವುದು ಅವರ ಅಭಿಪ್ರಾಯ.
ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ಅನ್ಯಗ್ರಹ ವಾಸಿಗಳು ಇರುವುದಾದಲ್ಲಿ ಅವರೇಕೆ ನಮಗೆ ಕಾಣಿಸಿಕೊಂಡಿಲ್ಲ? ಈ ಪ್ರಶ್ನೆಯನ್ನು ಖ್ಯಾತ ಅಣುಭೌತಶಾಸ್ತ್ರಜ್ಞ ಎನ್ರಿಕೊ ಫರ್ಮಿ 1950ರಲ್ಲೇ ಕೇಳಿದ್ದರು. ಈ ಪ್ರಶ್ನೆಯನ್ನೇ `ಫರ್ಮಿ ವಿರೋಧಾಭಾಸ' (ಫರ್ಮಿ ಪ್ಯಾರಾಡಾಕ್ಸ್) ಎನ್ನುತ್ತಾರೆ. ಈ ಪ್ರಶ್ನೆಗೆ ಎರಡು ಮಗ್ಗುಲುಗಳಿವೆ- ಒಂದು, ಇತರ ಅನ್ಯಗ್ರಹ ನಾಗರಿಕತೆಗಳಿಂದ ಬಂದಿರಬಹುದಾದ ರೇಡಿಯೋ ಸಂಕೇತಗಳನ್ನು ಗ್ರಹಿಸುವಲ್ಲಿ ನಮ್ಮ ವಿಫಲತೆ ಹಾಗೂ ಮತ್ತೊಂದು ಈ ಭೂಮಿಗೆ ಯಾವಾಗಲಾದರೂ ಅನ್ಯಗ್ರಹ ಜೀವಿಗಳು ಭೇಟಿ ನೀಡಿದ್ದಾರೆನ್ನಲು ಇದುವರೆಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕದಿರುವುದು.

ಇದುವರೆವಿಗೂ ಈ ಎರಡೂ ವಿಷಯಗಳಲ್ಲಿ ಯಾವುದೇ ಯಶಸ್ಸು ದೊರಕಿಲ್ಲ. ಹಾಗೆಂದ ಮಾತ್ರಕ್ಕೆ ಅನ್ಯಗ್ರಹ ಜೀವಿಗಳು ಇಲ್ಲವೇ ಇಲ್ಲ ಎಂಬ ತೀರ್ಮಾನಕ್ಕೆ ಬರಲಾಗದು, ಏಕೆಂದರೆ ನಾವಿನ್ನೂ ಈ ಹುಡುಕಾಟದ ಪ್ರಾಥಮಿಕ ಹಂತದಲ್ಲಷ್ಟೇ ಇದ್ದೇವೆ ಹಾಗೂ ನಮ್ಮ ಅನ್ವೇಷಣೆ ಈ ಅನಂತ ವಿಶ್ವದ ಸೂಜಿಮೊನೆಗಿಂತ ಚಿಕ್ಕ ಸ್ಥಳದಲ್ಲಷ್ಟೇ ನಡೆದಿದೆ. ಆದರೂ ರೇಡಿಯೋ ಸಂಕೇತ ಕಳುಹಿಸುವ ಸಾಧ್ಯತೆಯಿರುವ ನಾಗರಿಕತೆಗಳ ಬಗೆಗೆ ಕೆಲವು ಕರಡು ನಿರ್ಧಾರಗಳನ್ನಂತೂ ತೆಗೆದುಕೊಳ್ಳಬಹುದು.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪಾಲ್ ಹೋರೋವಿಟ್ಜ್ರ ಪ್ರಕಾರ ನಮ್ಮ ಹಾಲುಹಾದಿ ಆಕಾಶಗಂಗೆಯೊಳಗೆ ಸೂರ್ಯನಿಂದ 1000 ಜ್ಯೋತಿವರ್ಷ ವಿಸ್ತಾರದೊಳಗೆ ಸುಮಾರು ಹತ್ತು ಲಕ್ಷ ಸೂರ್ಯನಂತಹುದೇ ನಕ್ಷತ್ರಗಳಿವೆ, ಅಂದರೆ ಕಡಿಮೆಯೆಂದರೂ ನಮ್ಮ ಆಕಾಶಗಂಗೆಯಲ್ಲಿಯೇ ಒಂದು ಸಾವಿರ ನಾಗರಿಕತೆಗಳಿರಬಹುದು. ನಮ್ಮ ಭೂಮಿಯ ವಯಸ್ಸು 4.6 ಬಿಲಿಯನ್ ವರ್ಷಗಳಷ್ಟಾಗಿದೆ ಹಾಗೂ ಇಲ್ಲಿ ಜೀವ ವಿಕಾಸ ಏನಿಲ್ಲವೆಂದರೂ 3.5 ಬಿಲಿಯನ್ ವರ್ಷಗಳಷ್ಟು ಹಿಂದೆಯೇ ಪ್ರಾರಂಭವಾಗಿದೆ. ಆದರೆ ನಮ್ಮ ಭೂಮಿಯಿರುವ ಆಕಾಶಗಂಗೆಯ ವಯಸ್ಸು 12 ಬಿಲಿಯನ್ ವರ್ಷಗಳು. ಬಹಳ ಹಿಂದೆಯೇ ಈ ಆಕಾಶಗಂಗೆಯಲ್ಲಿ ಭೂಮಿಯಂತಹ ಗ್ರಹಗಳು ರೂಪುಗೊಂಡಿರಬಹುದು ಹಾಗೂ ಅವುಗಳಲ್ಲಿ ಜೀವವಿಕಾಸವಾಗಿ ನಾಗರಿಕತೆ ಇದ್ದಿರಬಹುದು. ಒಂದಷ್ಟು ವರ್ಷಗಳ ನಂತರ ಅವು ನಶಿಸಿಯೂ ಹೋಗಿರಬಹುದು ಅದೇ ರೀತಿ ತಡವಾಗಿ ರೂಪುಗೊಂಡ ಗ್ರಹಗಳಲ್ಲಿ ಜೀವವಿಕಾಸ ನಡೆಯುತ್ತಲೂ ಇರಬಹುದು. ಈ ರೀತಿ ನಾಗರಿಕತೆಗಳ ವಿಕಾಸ ಸಾಕಷ್ಟು ಗ್ರಹಗಳಲ್ಲಿ ನಡೆದಿರುವುದಾದರೆ ನಮಗೆ ಏಕೆ ಇದುವರೆವಿಗೂ ಅವುಗಳ ಅಸ್ತಿತ್ವದ ಬಗ್ಗೆ ಒಂದೂ ಪುರಾವೆ ದೊರೆತಿಲ್ಲ?

ಈ ವಿಶ್ವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿರುವ ನಾಗರಿಕತೆಗಳು ಇವೆಯೆಂದು ನಂಬಿದರೂ ಸಹ ಅವು ಏಕೆ ಭೂಮಿಗೆ ಇದುವರೆವಿಗೆ ಭೇಟಿ ನೀಡಿಲ್ಲ? ಈ ವಿಷಯದ ಬಗೆಗೆ 1975ರಲ್ಲೇ ಖಗೋಳಶಾಸ್ತ್ರಜ್ಞ ಮೈಕೆಲ್ ಎಚ್. ಹಾರ್ಟ್ ಮತ್ತು ಇಂಜಿನಿಯರ್ ಆದ ಡೇವಿಡ್ ವ್ಯೂಯಿಂಗ್ ತಮ್ಮ ಲೇಖನಗಳಲ್ಲಿ ಚರ್ಚಿಸಿದ್ದಾರೆ. ಹಾರುವ ತಟ್ಟೆಗಳ ಬಗೆಗಿನ ಕತೆಗಳಲ್ಲಿ ಎಷ್ಟು ಸತ್ಯವಿದೆ ಎಷ್ಟು ಪೊಳ್ಳಿದೆ ಎನ್ನುವುದರ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಾಗಿದೆ. ಅನ್ಯಗ್ರಹ ಜೀವಿಗಳು ಭೂಮಿಗೆ ಭೇಟಿ ನೀಡಿಲ್ಲ ಎನ್ನಲು ನಾಲ್ಕು ಕಾರಣಗಳನ್ನು ಹೇಳಬಹುದು: ಮೊದಲ ಕಾರಣ ಬಹುಶಃ ದೂರದ ಅಂತರಿಕ್ಷ ಯಾನ ಸಾಧ್ಯವಿಲ್ಲ. ಇದು ನಿಜವಾದರೆ ಅನ್ಯಗ್ರಹ ಜೀವಿಗಳು ನಮ್ಮಲ್ಲಿಗೆ ಬರಬೇಕೆಂದರೂ ಸಾಧ್ಯವಿಲ್ಲ. ಎರಡನೇ ಕಾರಣ, ಅನ್ಯಗ್ರಹ ಜೀವಿಗಳು ಈಗಾಗಲೇ ತಮ್ಮ ಅನ್ವೇಷಣೆ ನಡೆಸುತ್ತಿರಬಹುದು, ಆದರೆ ಅವರ ಪಯಣ ಇನ್ನೂ ಭೂಮಿಯವರೆಗೆ ತಲುಪಿಲ್ಲ. ಮೂರನೆಯ ಕಾರಣ, ದೂರದ ಅಂತರಿಕ್ಷ ಯಾನ ಸಾಧ್ಯವಿದೆ, ಆದರೆ ಅನ್ಯಗ್ರಹ ಜೀವಿಗಳು ಆ ಯಾನವನ್ನು ಕೈಗೊಳ್ಳದಿರಲು ನಿರ್ಧರಿಸಿದ್ದಾರೆ. ಕೊನೆಯ ಹಾಗೂ ನಾಲ್ಕನೆಯ ಕಾರಣ, ಅನ್ಯಗ್ರಹ ಜೀವಿಗಳು ಭೂಮಿಯ ಹತ್ತಿರದಲ್ಲೇ ನಮ್ಮ ಕಣ್ಣಿಗೆ ಬೀಳದಂತೆ ಸುತ್ತಾಡುತ್ತಾ ನಮ್ಮನ್ನು ಗಮನಿಸುತ್ತಿದ್ದಾರೆ ಆದರೆ, ಅವರು ನಮ್ಮ ತಂಟೆಗೆ ಬರಬಾರದೆಂದು ನಿರ್ಧರಿಸಿದ್ದಾರೆ.

`ಫರ್ಮಿ ವಿರೋಧಾಭಾಸ'ದ ಈ ಕಾರಣಗಳೆಲ್ಲವೂ ನಿಜವಾದದ್ದಾದರೆ, ಈ ಆಕಾಶಗಂಗೆಯಲ್ಲಿನ ಅತ್ಯಂತ ಬುದ್ಧಿವಂತ, ತಾಂತ್ರಿಕವಾಗಿ ಮುಂದುವರಿದ ಜೀವಿಗಳು ನಾವು ಮಾತ್ರ ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಮೊದಲ ಕಾರಣವಾದ `ಬಹುಶಃ ದೂರದ ಅಂತರಿಕ್ಷ ಯಾನ ಸಾಧ್ಯವಿಲ್ಲ' ಎನ್ನುವುದನ್ನು ತಿರಸ್ಕರಿಸಬೇಕಾಗುತ್ತದೆ, ಏಕೆಂದರೆ ನಮಗೆ ತಿಳಿದಿರುವ ಭೌತಶಾಸ್ತ್ರದ ಮತ್ತು ಇಂಜಿನಿಯರಿಂಗ್ ತತ್ವಗಳು ದೂರದ ಅಂತರಿಕ್ಷ ಯಾನವನ್ನು ನಿರಾಕರಿಸುವುದಿಲ್ಲ. ಅಂತರಿಕ್ಷ ಯುಗದ ಪ್ರಾರಂಭದ ಸಮಯಗಳಲ್ಲಿಯೇ ಬೆಳಕಿನ ವೇಗದ ಶೇ.೧೦ರಿಂದ ೨೦ರಷ್ಟು ವೇಗದಲ್ಲಿ ಪ್ರಯಾಣ ಮಾಡುವುದು ಸಾಧ್ಯವೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂದರೆ ಈ ವೇಗದಲ್ಲಿ ಪ್ರಯಾಣ ಮಾಡಿದರೆ ಕೆಲವೇ ದಶಕಗಳಲ್ಲಿ ಹತ್ತಿರದ ನಕ್ಷತ್ರಗಳನ್ನು ತಲುಪಬಹುದು. ಅದೇ ರೀತಿ ಎರಡನೇ ಕಾರಣವನ್ನೂ ತಿರಸ್ಕರಿಸಬೇಕಾಗುತ್ತದೆ. ಮುಂದುವರಿದ ರಾಕೆಟ್ ತಂತ್ರಜ್ಞಾನವನ್ನು ಹೊಂದಿರುವ ಯಾವುದೇ ನಾಗರಿಕತೆ `ಅಂತರಿಕ್ಷ ಅಲ್ಪಾವಧಿ'ಯಲ್ಲಿ ಇಡೀ ಆಕಾಶಗಂಗೆಯ ಭೂಮಿಯಂತಹ ಗ್ರಹಗಳನ್ನು ತಮ್ಮ ಕಾಲೊನಿಗಳಾಗಿ ಮಾಡಿಕೊಂಡುಬಿಡಬಹುದು. ಉದಾಹರಣೆಗೆ, ನಾಗರಿಕತೆಯೊಂದು ತನ್ನ ಜೀವಿಗಳನ್ನು ತನಗೆ ಹತ್ತಿರವಿರುವ ಗ್ರಹಗಳಿಗೆ ನೆಲೆಸಲು ಕಳುಹಿಸಿಕೊಡುತ್ತದೆ ಎಂದಿಟ್ಟುಕೊಳ್ಳೋಣ. ಆ ಹೊಸಗ್ರಹಗಳಲ್ಲಿ ನೆಲೆಗೊಂಡ ಜೀವಿಗಳು ಸ್ವತಃ ತಾವಾಗಿಯೇ ತಮ್ಮ ಜೀವಿಗಳನ್ನು ಅದಕ್ಕೆ ಹತ್ತಿರದ ಇತರ ಗ್ರಹಗಳಿಗೆ ನೆಲೆಸಲು ಕಳುಹಿಸಿಕೊಡುತ್ತದೆ. ಇದು ಹೀಗೆಯೇ ಒಂದು ಎರಡಾಗುವ, ಎರಡು ನಾಲ್ಕಾಗುವ, ನಾಲ್ಕು ಎಂಟಾಗುವ, ಎಂಟು ಹದಿನಾರಾಗುವ ಲೆಕ್ಕದಲ್ಲಿ ಪಸರಿಸುತ್ತಾ ಹೋಗುತ್ತದೆ. ಇದರಿಂದಾಗಿ ನೆಲೆಯೋಗ್ಯ ಗ್ರಹಗಳಲ್ಲೆಲ್ಲಾ ಕಾಲೊನಿಗಳು ಏರ್ಪಡುತ್ತವೆ.

ಪ್ರತಿಯೊಂದು ಕಾಲೊನಿಯ ನಡುವೆಯೂ ಸರಾಸರಿ 10 ಜ್ಯೋತಿರ್ವರ್ಷಗಳ ಅಂತರವಿದ್ದು ಹೊಸ ಕಾಲೊನಿಯೊಂದು ನೆಲೆಸಿ ಅಲ್ಲಿಂದ ಮತ್ತೊಂದು ಕಾಲೊನಿಯನ್ನು ಇತರ ಗ್ರಹಗಳಿಗೆ ಕಳುಹಿಸಿಕೊಡಲು ಸುಮಾರು 400 ವರ್ಷಗಳ ಸಮಯ ಬೇಕೆಂದಿಟ್ಟುಕೊಳ್ಳೋಣ. ನಮ್ಮ ಆಕಾಶಗಂಗೆಯು ಒಂದು ಲಕ್ಷ ಜ್ಯೋತಿರ್ವರ್ಷಗಳಷ್ಟು ವಿಸ್ತಾರವಾಗಿರುವುದರಿಂದ ಇಡೀ ಆಕಾಶಗಂಗೆ ಕಾಲೊನಿಗಳಿಂದ ನೆಲೆಸಲು ಸುಮಾರು ಐದು ದಶಲಕ್ಷ ವರ್ಷಗಳು ಬೇಕಾಗುತ್ತದೆ. ಈ ಐದು ದಶಲಕ್ಷ ವರ್ಷಗಳು ನಮ್ಮಂಥ ಹುಲುಮಾನವರಿಗೆ ಅತ್ಯಂತ ದೀರ್ಘ ಸಮಯ ಎನ್ನಿಸಿದರೂ ಅದು ಆಕಾಶಗಂಗೆಯ ವಯಸ್ಸಿನ ಕೇವಲ ಶೇ.0.05ರಷ್ಟು ಮಾತ್ರವಾಗಿದೆ. ಖಗೋಳದ ಮತ್ತು ಜೈವಿಕ ಸಮಯಾವಧಿಗಳ ಲೆಕ್ಕದಲ್ಲಿ ಇದು ಅತ್ಯಂತ `ಕ್ಷಿಪ್ರ'ವೆನ್ನಿಸುವ ಸಮಯ.
ಕಾಲೊನಿಯೊಂದು ನೆಲೆಸಿ ಅಲ್ಲಿಂದ ಮತ್ತೊಂದು ಕಾಲೊನಿಯನ್ನು ಇತರ ಗ್ರಹಗಳಿಗೆ ಕಳುಹಿಸಿಕೊಡಲು 400 ವರ್ಷಗಳ ಸಮಯ ತೀರಾ ಕಡಿಮೆಯೆನ್ನಿಸಿದರೆ, ಆ ಸಮಯವನ್ನು ಐದು ಸಾವಿರ ವರ್ಷಗಳಿಗೇರಿಸಬಹುದು, ಏಕೆಂದರೆ ಮನುಷ್ಯ ತನ್ನ ಮೊದಲ ನಗರ ನಿರ್ಮಾಣಗಳಿಂದ ಅಂತರಿಕ್ಷಯಾನದವರೆಗೆ ಅಭಿವೃದ್ಧಿಹೊಂದಲು ಅಷ್ಟೇ ಸಮಯವನ್ನು ತೆಗೆದುಕೊಂಡಿದ್ದಾನೆ. ಹಾಗಾದಲ್ಲಿ ಇಡೀ ಆಕಾಶಗಂಗೆ ಕಾಲೊನಿಗಳಿಂದ ನೆಲೆಸಲು ಸುಮಾರು ಐವತ್ತು ದಶಲಕ್ಷ ವರ್ಷಗಳು ಬೇಕಾಗುತ್ತದೆ. ಅಂದರೆ ಆ ರೀತಿ ವಿಕಾಸಗೊಂಡ ಮೊಟ್ಟ ಮೊದಲ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಾಗರಿಕತೆ ಈ ರೀತಿ ಕಾಲೊನಿಗಳನ್ನು ಸ್ಥಾಪಿಸುವ ಕೆಲಸವನ್ನು ಇತರ ಗ್ರಹಗಳಲ್ಲಿ ಜೀವಿಗಳು ವಿಕಾಸಹೊಂದುವ ಮೊದಲೇ ನಡೆಸಿರಬೇಕು. ಅಂದರೆ ಇದು ಬಿಲಿಯಗಟ್ಟಲೆ ವರ್ಷಗಳ ಹಿಂದೆಯೇ, ಭೂಮಿಯ ಮೇಲೆ ಇನ್ನೂ ಸೂಕ್ಷ್ಮಜೀವಿಗಳು ಮಾತ್ರ ಇದ್ದಾಗ, ಹೊರಗಿನ `ಕೈಚಳಕಕ್ಕೆ' ತಾನು ತೆರೆದುಕೊಂಡಿದ್ದಾಗ ನಡೆದಿರಬೇಕು. ಆದರೂ ಭೂಮಿಯ ಮೇಲೆ ಆ ರೀತಿಯ ಕೈಚಳಕ ನಡೆದಿರುವುದಕ್ಕೆ ಯಾವುದೇ ಪುರಾವೆಯಿಲ್ಲ- ಯಾವುದೇ ಭೌತಿಕ ರಚನೆಗಳಾಗಲಿ, ರಾಸಾಯನಿಕ ಅಂಶಗಳಾಗಲಿ, ಯಾವುದೇ ಜೈವಿಕ ಪ್ರಭಾವಗಳಾಗಲೀ ಭೂಮಿಯ ಮೇಲೆ ಕಂಡುಬಂದಿಲ್ಲ. ಭೂಮಿಯ ಮೇಲೆ ಈ ರೀತಿಯ ಕೈಚಳಕದಿಂದ `ಜೀವದ ಬೀಜವನ್ನು ಬಿತ್ತಲಾಗಿದೆ' ಎಂದು ಕೆಲವು ಕೆಲವು ವಿಜ್ಞಾನಿಗಳ ಊಹಿಸುತ್ತಾರೆ. ಅದನ್ನು ನಂಬಿದರೂ ಸಹ ಆ ಬಿತ್ತನೆಯ ಸಮಯದಿಂದ ಜೀವರಾಶಿಯ ಮೇಲ್ವಿಚಾರಣೆಗೆ ಯಾವ `ರೈತ'ನೂ ಬಂದಿಲ್ಲ.

ದೂರದ ಅಂತರಿಕ್ಷ ಯಾನ ಸಾಧ್ಯವಿದೆ, ಆದರೆ ಅನ್ಯಗ್ರಹ ಜೀವಿಗಳು ಆ ಯಾನವನ್ನು ಕೈಗೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನುವ ಮೂರನೆಯ ಕಾರಣವನ್ನೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ನಕ್ಷತ್ರವೂ ಶಾಶ್ವತವಲ್ಲ- ಒಂದಲ್ಲ ಒಂದು ದಿನ ಅದು ಉರಿದು ತನ್ನಲ್ಲಿನ ಜಲಜನಕದ ಇಂಧನ ಖಾಲಿಯಾದ ಮೇಲೆ `ಕೆಂಪು ದೈತ್ಯ' (Red Giant) ಆಗಲೇ ಬೇಕು. ಸೂರ್ಯ ಕಂದಿಹೋಗಿ ಗ್ರಹ ನಾಶವಾಗುತ್ತಿರುವಾಗ ಯಾವ ತಾಂತ್ರಿಕವಾಗಿ ಮುಂದುವರಿದ ನಾಗರಿಕತೆಯೂ ತಮ್ಮ ಸಂಪೂರ್ಣ ವಿನಾಶವನ್ನು ಎದುರುನೋಡುತ್ತಾ ಕೂಡುವುದಿಲ್ಲ. ಅದು ಇತರ ಗ್ರಹಗಳತ್ತ ನೆಲೆ ಅರಸಿಹೊರಡಲೇ ಬೇಕಾಗುತ್ತದೆ. ಅನ್ಯಗ್ರಹ ಜೀವಿಗಳು ಭೂಮಿಯ ಹತ್ತಿರದಲ್ಲೇ ನಮ್ಮ ಕಣ್ಣಿಗೆ ಬೀಳದಂತೆ ಸುತ್ತಾಡುತ್ತಾ ನಮ್ಮನ್ನು ಗಮನಿಸುತ್ತಿದ್ದಾರೆ ಆದರೆ, ಅವರು ನಮ್ಮ ತಂಟೆಗೆ ಬರಬಾರದೆಂದು ನಿರ್ಧರಿಸಿದ್ದಾರೆ ಎನ್ನುವ ಕೊನೆಯ ಕಾರಣದ ತಿರಸ್ಕಾರಕ್ಕೆ ನಮ್ಮನ್ನೇ ಉದಾಹರಣೆಯಾಗಿ ಕೊಡಬೇಕಾಗುತ್ತದೆ. ನಮ್ಮನ್ನು ನಾವು ತಾಂತ್ರಿಕವಾಗಿ ಮುಂದುವರಿದವರು ಎಂದು ಪರಿಗಣಿಸಿಕೊಳ್ಳುವುದಾದಲ್ಲಿ ನಾವು ನಮ್ಮಷ್ಟಕ್ಕೆ ನಾವೇ ಇದ್ದೇವೆಯೆ? ಈಗಾಗಲೇ ಚಂದ್ರನ ಮೇಲೆ ಕಾಲಿರಿಸಿದ್ದಲ್ಲದೆ, ಮಂಗಳನ ಮೇಲೂ ಕಾಲಿರಿಸಲು ಸಿದ್ಧವಾಗುತ್ತಿದ್ದೇವೆ. ಮಾನವ ನಿರ್ಮಿತ ಉಪಗ್ರಹಗಳು, ಇತರ ಉಪಕರಣಗಳು ಕುತೂಹಲದ ಅನ್ವೇಷಣೆಯಲ್ಲಿ ಸೌರವ್ಯೂಹವನ್ನೇ ದಾಟಿ ಹೊರಹೊರಟಿವೆ. ಇಂದಲ್ಲ ನಾಳೆ, ಇತರ ಗ್ರಹಗಳಲ್ಲಿ ನಮ್ಮ ಕಾಲೊನಿಗಳನ್ನು ಸ್ಥಾಪಿಸುವ ಪ್ರಯತ್ನಗಳು ನಡೆದೇ ನಡೆಯುತ್ತವೆ. ಹಾಗಾಗಿ ಅನ್ಯಗ್ರಹ ಜೀವಿಗಳು ಭೂಮಿಯ ಹತ್ತಿರದಲ್ಲೇ ನಮ್ಮ ಕಣ್ಣಿಗೆ ಬೀಳದಂತೆ ಸುತ್ತಾಡುತ್ತಾ ನಮ್ಮನ್ನು ಗಮನಿಸುತ್ತಾ ಇದ್ದರೂ ಅವರು ಸುಮ್ಮನಿರುವುದು ಸಾಧ್ಯವಿಲ್ಲ.

ಹಾಗಾದರೆ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ನಾಗರಿಕತೆಗಳ ವಿರಳತೆಗೆ/ಇಲ್ಲವೇ ಇಲ್ಲವೆನ್ನಲು ಕಾರಣವೇನು? ಕೆಲವು ವಿಜ್ಞಾನಿಗಳು ಹೇಳುವಂತೆ ಜೀವ ವಿಕಾಸಕ್ಕೆ ಕೆಲವು ರಾಸಾಯನಿಕಗಳು ಅತ್ಯವಶ್ಯಕ, ಅಂದರೆ ಜಲಜನಕ ಮತ್ತು ಹೀಲಿಯಂಗಿಂತ ಹೆಚ್ಚು ತೂಕದ ಧಾತು(Elements)ಗಳಾಗಿರುವಂತಹ ಪ್ರಮುಖವಾಗಿ ಇಂಗಾಲ, ಸಾರಜನಕ ಮತ್ತು ಆಮ್ಲಜನಕ ಭೂಮಿಯ ಮೇಲಿನ ಜೀವರಾಶಿಗಾಗಲೀ ಅಥವಾ ಅನ್ಯಗ್ರಹ ಜೀವರಾಶಿಗಾಗಲೀ ಅತ್ಯವಶ್ಯಕ. ಈ ಧಾತುಗಳು ನಕ್ಷತ್ರಗಳಲ್ಲಿ ನಡೆಯುವ ಅಣುಪ್ರಕ್ರಿಯೆಗಳಲ್ಲಿ ಉತ್ಪತ್ತಿಯಾಗುತ್ತವೆ. ನಮ್ಮ ನಕ್ಷತ್ರವಾದ ಸೂರ್ಯನಲ್ಲಿ ಅದರ ವಯಸ್ಸಿಗೆ ಹೋಲಿಸಿದಲ್ಲಿ ಈ ಧಾತುಗಳು ಯಥೇಚ್ಛವಾಗಿವೆ ಹಾಗಾಗಿ ಇಲ್ಲಿ ಜೀವವಿಕಾಸವಾಗಿದೆ, ಬಹಳ ಹಿಂದೆ ಇದು ಕಡಿಮೆಯಿತ್ತು, ಹಾಗಾಗಿ ಬೇರೆಡೆ ಜೀವವಿಕಾಸವಾಗಿರುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಈ ವಾದದ ಸಮರ್ಥನೆಯೂ ಕಷ್ಟ, ಏಕೆಂದರೆ ಜೀವವಿಕಾಸಕ್ಕೆ ಅವಶ್ಯಕ ಧಾತುವಿನ ಸಂದಿಗ್ಧ ಪ್ರಮಾಣ ಎಷ್ಟೆಂಬುದು ವಿಜ್ಞಾನಿಗಳಿಗೂ ತಿಳಿದಿಲ್ಲ. ಸೂರ್ಯನಲ್ಲಿರುವ ಧಾತುವಿನ ಪ್ರಮಾಣದ ಹತ್ತನೇ ಒಂದು ಭಾಗವಿದ್ದರೂ ಜೀವವಿಕಾಸ ಸಾಧ್ಯವಾಗುತ್ತದೆ ಎನ್ನುವುದಾದಲ್ಲಿ ಅಷ್ಟು ಪ್ರಮಾಣದ ಧಾತುವನ್ನು ಹೊಂದಿರುವ ಹಾಗೂ ವಯಸ್ಸಿನಲ್ಲಿ ಸೂರ್ಯನಿಗಿಂತ ಹಿರಿಯವಾದ ನಕ್ಷತ್ರಗಳು ನಮ್ಮ ಆಕಾಶಗಂಗೆಯಲ್ಲಿ ಸಾಕಷ್ಟಿದ್ದು ಅಲ್ಲಿಯೂ ಜೀವವಿಕಾಸವಾಗಬೇಕಿತ್ತು. ಹಾಗಾಗಿ ಅದೇ ಕಾರಣವಲ್ಲ ಎನ್ನುತ್ತಾರೆ ಜಾರ್ಜ್ ಮುಸರ್ ಎನ್ನುವ ವಿಜ್ಞಾನಿ.

ಅದಕ್ಕೆ ಮತ್ತೊಂದು ಉದಾಹರಣೆಯಂದರೆ ನಮಗೆ ಹತ್ತಿರವಿರುವ 47 ಉರ್ಸೆ ಮೆಜೋರಿಸ್ ಎನ್ನುವ ನಕ್ಷತ್ರ. ಆ ನಕ್ಷತ್ರ ನಮ್ಮ ಗುರುಗ್ರಹ ಗಾತ್ರದ ಗ್ರಹ ಹೊಂದಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆ ನಕ್ಷತ್ರದಲ್ಲೂ ನಮ್ಮ ಸೂರ್ಯನಲ್ಲಿರುವಂತಹ ಧಾತುಗಳು ಅದೇ ಪ್ರಮಾಣದಲ್ಲಿವೆ ಹಾಗೂ ಆ ನಕ್ಷತ್ರದ ವಯಸ್ಸು ಸುಮಾರು ಏಳು ಬಿಲಿಯನ್ ವರ್ಷಗಳೆಂದು ಅಂದಾಜುಮಾಡಲಾಗಿದೆ. ಆ ನಕ್ಷತ್ರ ಮತ್ತು ಅದರ ಗ್ರಹವನ್ನು ಸೂರ್ಯ ಮತ್ತು ಭೂಮಿಯ ವಯಸ್ಸಿಗೆ ಹೋಲಿಸಿಕೊಂಡಲ್ಲಿ ಅಲ್ಲಿ 2.5 ಬಿಲಿಯನ್ ವರ್ಷಗಳ ಹಿಂದೆಯೇ ಜೀವವಿಕಾಸವಾಗಬೇಕಾಗಿತ್ತು. ಅದೇ ತರಹದ ನಕ್ಷತ್ರ ಮತ್ತು ಗ್ರಹಗಳು ನಮ್ಮ ಆಕಾಶಗಂಗೆಯಲ್ಲಿ, ವಿಶೇಷವಾಗಿ ಅದರ ಕೇಂದ್ರಭಾಗದಲ್ಲಿ ಕೋಟಿಗಟ್ಟಲೆ ಇವೆ. ಆದುದರಿಂದ `ಫರ್ಮಿ ವಿರೋಧಾಭಾಸ'ವನ್ನು ವಿವರಿಸಲು ರಾಸಾಯನಿಕ ವಿಕಾಸ ಸಮರ್ಥವಾಗಲಾರದು.

ಭೂಮಿಯ ಮೇಲಿನ ಜೀವವಿಕಾಸದ ಚರಿತ್ರೆಯೇ ಇದಕ್ಕೆ ವಿವರಣೆ ನೀಡಬಲ್ಲುದು ಎನ್ನುತ್ತಾರೆ ಕೆಲವು ವಿಜ್ಞಾನಿಗಳು. ಭೂಮಿಯ ರಚನೆಯ ಬಹುಪಾಲು ಪ್ರಾರಂಭದಿಂದಲೇ ಜೀವಿಗಳು ಕಂಡುಬಂದಿವೆ, ಆದರೆ ಅವು ಬ್ಯಾಕ್ಟೀರಿಯಾದಂತಹ ಏಕಕೋಶಿಕ ಸೂಕ್ಷ್ಮಜೀವಿಗಳಾಗಿದ್ದವು (Single-Celled microorganisms). ಸಸ್ಯ, ಪ್ರಾಣಿಗಳಂತಹ ಬಹುಕೋಶಿಕ ಜೀವಿಗಳು 700 ಮಿಲಿಯನ್ ವರ್ಷಗಳವರೆಗೂ ಕಾಣಿಸಿಕೊಳ್ಳಲಿಲ್ಲ. ಅಂದರೆ, ಮುನ್ನೂರು ಬಿಲಿಯನ್ ವರ್ಷಗಳಿಗಿಂತ ಹೆಚ್ಚಿನ ಕಾಲ ಭೂಮಿ ಕೇವಲ ಏಕಕೋಶಿಕ ಸೂಕ್ಷ್ಮಜೀವಿಗಳ ಸಾಮ್ರಾಜ್ಯವಾಗಿತ್ತು. ಈ ದೀರ್ಘಾವಧಿಯನ್ನು ಗಮನಿಸಿದರೆ ಏಕಕೋಶಿಕ ಸೂಕ್ಷ್ಮಜೀವಿಗಳಿಂದ ಬಹುಕೋಶಿಕ ಜೀವಿಗಳ ರೂಪಾಂತರ ತೀರಾ ಸಂಕೀರ್ಣವಾದುದು. ಹಾಗಾಗಿ ಲಕ್ಷಾಂತರ ಗ್ರಹಗಳಲ್ಲಿ ಜೀವವಿಕಾಸವಾಗಿ ಏಕಕೋಶಿಕ ಸೂಕ್ಷ್ಮಜೀವಿಗಳಿದ್ದರೂ ಅವು ಬಹುಕೋಶಿಕ ಜೀವಿಗಳಾಗಿ ರೂಪಾಂತರ ಹೊಂದಿರುವ ಸಾಧ್ಯತೆಗಳು ತೀರಾ ಕಡಿಮೆ. ಬ್ಯಾಕ್ಟೀರಿಯಾಗಳು ದೀರ್ಘಕಾಲ ಭೂಮಿಯ ಮೇಲಿದ್ದು ದ್ಯುತಿಸಂಶ್ಲೇಷಣೆಯ (Photosynthesis) ಮೂಲಕ ವಾತಾವರಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡಿ ಬಹುಕೋಶಿಕ ಜೀವಿಗಳ ವಿಕಾಸಕ್ಕೆ ಅನುವುಮಾಡಿಕೊಟ್ಟಿದೆ ಹಾಗಾಗಿ ಬ್ಯಾಕ್ಟೀರಿಯಾದಂತಹ ಏಕಕೋಶಿಕ ಜೀವಿಗಳು ಸುದೀರ್ಘ ಕಾಲ ಇರುವುದು ಅತ್ಯವಶ್ಯಕ ಎನ್ನುವುದಾದರೆ ಇತರ ಗ್ರಹಗಳಲ್ಲಿಯೂ ಅವುಗಳದೇ ಸುದೀರ್ಘ ಸಮಯದ ನಂತರ ಏಕಕೋಶಿಕ ಸೂಕ್ಷ್ಮಜೀವಿಗಳು ಬಹುಕೋಶಿಕ ಜೀವಿಗಳಾಗಿ ವಿಕಾಸ ಹೊಂದಿರಬಹುದು. ಆ ರೀತಿ ವಿಕಾಸಹೊಂದಿದೆ ಎಂದಿಟ್ಟುಕೊಳ್ಳೋಣ. ಆ ರೀತಿಯ ಬಹುಕೋಶಿಕ ಜೀವಿಗಳು ಬುದ್ಧಿವಂತ ಅದರಲ್ಲೂ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ಜೀವಿಗಳಾಗುವ ಸಾಧ್ಯತೆಗಳು ಎಷ್ಟಿರುತ್ತದೆ? ಖ್ಯಾತ ವಿಜ್ಞಾನಿ ಸ್ಟೀಫನ್ ಜೇ ಗೌಲ್ಡ್ ತಮ್ಮ ಪುಸ್ತಕ ವಂಡರ್ಫುಲ್ ಲೈಫ್ನಲ್ಲಿ ಹೇಳಿರುವಂತೆ ಭೂಮಿಯ ಮೇಲೆ ಬುದ್ಧಿವಂತ ಜೀವಿಗಳ ವಿಕಾಸ ಹಲವಾರು ಅತ್ಯವಶ್ಯಕ ಹಾಗೂ ಆಕಸ್ಮಿಕ ಪರಿಸರದ ಪರಿಣಾಮಗಳಿಂದ ಉಂಟಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಭೂಮಿಯ ಮೇಲಿನ ಡೈನೊಸಾರ್ಗಳದು. ಭೂಮಿಯ ಮೇಲೆ ಸುಮಾರು 140 ದಶಲಕ್ಷ ವರ್ಷಗಳವರೆಗೆ ಅವುಗಳದೇ ಮೇಲುಗೈ ಆಗಿತ್ತು. ಅಷ್ಟಾದರೂ ಅವು ತಾಂತ್ರಿಕ ನಾಗರಿಕತೆಯಾಗಿ ಅಭಿವೃದ್ಧಿಹೊಂದಲಿಲ್ಲ. ಕೇವಲ ಒಂದು ಆಕಸ್ಮಿಕ ಪ್ರಾಕೃತಿಕ ಘಟನೆಯಿಂದಾಗಿ ಅವುಗಳ ವಿನಾಶವಾಯಿತು. ಅಕಸ್ಮಾತ್ ಅವು ವಿನಾಶ ಹೊಂದಿರದಿದ್ದಲ್ಲಿ ಜೀವವಿಕಾಸದ ಚರಿತ್ರೆಯೇ ಬೇರೆಯಾಗಿರುತ್ತಿತ್ತು. ಭೂಮಿಯ ಮೇಲಿನ ಬುದ್ಧಿವಂತ ಜೀವಿಗಳ ವಿಕಾಸಕ್ಕೆ ಬಹಳಷ್ಟು ಸಂಖ್ಯೆಯ ಆಕಸ್ಮಿಕ ಘಟನೆಗಳು ಕಾರಣವಾಗಿವೆ ಹಾಗೂ ಅವುಗಳಲ್ಲಿ ಕೆಲವು ಕಾರಣಗಳು ನಡೆಯುವುದರ ಸಾಧ್ಯತೆ ತೀರಾ ಕಡಿಮೆಯಿದೆ. ಭೌತಶಾಸ್ತ್ರಜ್ಞ ಬ್ರಾಂಡನ್ ಕಾರ್ಟರ್, `ನಮ್ಮ ಭೂಮಿಗೆ ಇದ್ದಂತಹ ಅನುಕೂಲ ಪರಿಸ್ಥಿತಿ ಮತ್ತು ಸಂದರ್ಭಗಳು ಇದ್ದರೂ ಈ ವಿಶ್ವದಲ್ಲಿ ನಮ್ಮಂತಹುದೇ ನಾಗರಿಕತೆಗಳು ಇರುವ ಸಾಧ್ಯತೆಗಳು ತೀರಾ ವಿರಳ' ಎಂದು 1983ರಲ್ಲೇ ಹೇಳಿದ್ದಾರೆ. ಅದೆಷ್ಟು ವಿರಳವೆಂದರೆ ಸ್ಟೀಫನ್ ಜೇ ಗೌಲ್ಡ್ ಹೇಳುವಂತೆ ನಮ್ಮ ಭೂಮಿಯ ಚರಿತ್ರೆಯನ್ನು ಒಂದು `ಟೇಪ್' ಎಂದುಕೊಂಡು ಅದನ್ನು `ರೀವೈಂಡ್' ಮಾಡಿ ಮತ್ತೊಮ್ಮೆ `ಪ್ಲೇ' ಮಾಡಿದರೆ ಭೂಮಿಯ ಮತ್ತು ಅದರ ಮೇಲಿನ ಜೀವರಾಶಿಯ ಚರಿತ್ರೆ ಪುನರಾವರ್ತಿತವಾಗುವುದಿಲ್ಲ, ಅದರ ಚರಿತ್ರೆ ಬೇರೊಂದು ದಿಕ್ಕಿನಲ್ಲೇ ನಡೆಯುತ್ತದೆ. ಆಗ ಭೂಮಿಯ ಮೇಲೆ ಜೀವವಿಕಾಸವಾಗುವ ಸಾಧ್ಯತೆ ಇತರ ಗ್ರಹಗಳಲ್ಲಿರುವಂತೆಯೇ ಇರುತ್ತದೆ. ಬಹುಶಃ ಜೀವವಿಕಾಸವಾಗುವುದೇ ಇಲ್ಲ! ವಿಕಾಸವಾದರೂ ಜೀವರಾಶಿ ಈಗಿರುವಂತೆಯೇ ಇರುತ್ತದೆಯೇ? ಆ ಜೀವರಾಶಿ ತಾಂತ್ರಿಕವಾಗಿ ಅಭಿವೃದ್ಧಿಹೊಂದಿದ ನಾಗರಿಕತೆಯಾಗುತ್ತದೆಯೆ?

ನಮ್ಮ ಸೌರವ್ಯೂಹದಲ್ಲಿ
ನಮ್ಮ ಸೌರವ್ಯೂಹದಲ್ಲಿನ ಇತರ ಗ್ರಹಗಳು ಅಥವಾ ಅವುಗಳ ಉಪಗ್ರಹಗಳ ಮೇಲೆ ಜೀವವಿಕಾಸವಾಗಿರಬಹುದೆ? ಆ ರೀತಿ ಜೀವಿಗಳು ಇರಬಹುದಾದಲ್ಲಿ ಮಂಗಳ ಗ್ರಹ ಮತ್ತು ಗುರುಗ್ರಹದ ಉಪಗ್ರಹವಾದ ಯೂರೋಪಾದಲ್ಲಿ ಇರುವ ಅಥವಾ ಇದ್ದಿರಬಹುದಾದ ಸಾಧ್ಯತೆ ಇದೆಯೆನ್ನುತ್ತಾರೆ ವಿಜ್ಞಾನಿಗಳು.

ಇಂದಿನ ಮಂಗಳ ಗ್ರಹ ಜೀವಿಗಳಿಗೆ ಆಸರೆ ನೀಡುವ ಪರಿಸರವನ್ನು ಹೊಂದಿಲ್ಲ. ಅಲ್ಲಿನ ಸರಾಸರಿ ಉಷ್ಣಾಂಶ 220 ಕೆಲ್ವಿನ್ಗಿಂತ ಹೆಚ್ಚಾಗುವುದಿಲ್ಲ. ಅಂದರೆ ನೀರು ಹೆಪ್ಪುಗಟ್ಟುವ ಉಷ್ಣತೆಗಿಂತ 53 ಕೆಲ್ವಿನ್ ಕಡಿಮೆ. ಆದರೂ ಮಂಗಳನಲ್ಲಿ ದ್ರವ ರೂಪದ ನೀರು ಈ ಹಿಂದೆ ಇತ್ತೆಂಬುದಕ್ಕೆ ಪುರಾವೆಗಳಿವೆ. ದ್ರವ ರೂಪದ ನೀರು ಈಗಲೂ ಮಂಗಳನೊಳಗೆ ಇರಬಹುದು. ಮಂಗಳನ ಮೈಮೇಲೆ ನೀರು ಹರಿದಿತ್ತೆನ್ನುವ ಕಾಲುವೆಗಳು ಸಾಕಷ್ಟಿವೆ. 1877ರಲ್ಲೇ ಇಟಲಿಯ ವಿಜ್ಞಾನಿ ಜೇವಾನ್ನಿ ಶಿಯಾಪರೆಲ್ಲಿ ದೂರದರ್ಶಕದ ಮೂಲಕವೇ ಮಂಗಳನ ಮೇಲಿನ ಕಾಲುವೆಗಳನ್ನು ಕಂಡಿದ್ದ. 1908ರಲ್ಲಿ ಅಮೆರಿಕದ ವಿಜ್ಞಾನಿ ಪರ್ಸಿವಲ್ ಲೊವೆಲ್ ಎಂಬಾತ ಆ ಕಾಲುವೆಗಳನ್ನು ಮಂಗಳ ಗ್ರಹದ ಜೀವಿಗಳು ನೀರಾವರಿಗಾಗಿ ನಿರ್ಮಿಸಿರುವುದೆಂದೂ, ಮಂಗಳ ಗ್ರಹದಲ್ಲಿ ಜೀವಿಗಳು ಹಾಗೂ ನಾಗರಿಕತೆಯಿದೆಯೆಂದು ತನ್ನ ಕೃತಿ `ಮಾರ್ಸ್ ಅಸ್ ದ ಅಬೋಡ್ ಆಫ್ ಲೈಫ್'ನಲ್ಲಿ ತಿಳಿಸಿದ. ಮಂಗಳ ಗ್ರಹದ `ಜೀವಿ'ಗಳು ಬಹಳಷ್ಟು ಸಾಹಿತಿಗಳನ್ನು ಕಾಡಿವೆ ಹಾಗೂ ಅವುಗಳ ಬಗೆಗೆ ಸಾಕಷ್ಟು ಕತೆ, ಕಾದಂಬರಿಗಳು ಪ್ರಕಟವಾಗಿವೆ. 1897ರಲ್ಲಿ ಪ್ರಕಟವಾದ ಎಚ್.ಜಿ.ವೆಲ್ಸ್ರ ಕಾದಂಬರಿ `ದ ವಾರ್ ಆಫ್ ದ ವರ್ಲ್ಡ್ಸ್' ಬಹು ಪ್ರಖ್ಯಾತವಾದುದು. ಆ ಕಾಲ್ಪನಿಕ ಕಾದಂಬರಿಯಲ್ಲಿ ಮಂಗಳಗ್ರಹದ ಜೀವಿಗಳು ಭೂಮಿಯ ಮೇಲೆ ದಾಳಿ ನಡೆಸುತ್ತವೆ. 1938ರ ವಿಶ್ವಯುದ್ಧದ ಸಮಯದಲ್ಲಿ ಗಾಬರಿಗೊಂಡಿದ್ದ ಅಮೆರಿಕದ ಜನಕ್ಕೆ ಆರ್ಸನ್ ವೆಲ್ಸ್ ಎಂಬಾತ ತಯಾರಿಸಿದ `ದ ವಾರ್ ಆಫ್ ದ ವರ್ಲ್ಡ್ಸ್'ನ ಬಾನುಲಿ ಆವೃತ್ತಿ ಬಿತ್ತರಗೊಂಡಾಗ ಮಂಗಳ ಗ್ರಹದ ಜೀವಿಗಳು ನಿಜವಾಗಿಯೂ ಭೂಮಿಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೆದರಿ ಕಂಗಾಲಾಗಿ ಮನೆಬಿಟ್ಟು ಬೀದಿಗಳಿಗೆ ಓಡಿಬಂದಿದ್ದರು.

ಭೂಮಿಯಲ್ಲಿ ಜೀವದ ಬಿತ್ತನೆ ಮಂಗಳಗ್ರಹದಿಂದಲೇ ಬಂದಿದೆಯೆಂಬ ವಾದಗಳೂ ಇವೆ. 19ನೇ ಶತಮಾನದ ಕೊನೆಯಲ್ಲಿ ಗ್ರೀಕ್ ರಸಾಯನ ಶಾಸ್ತ್ರಜ್ಞ ಸ್ವಾಂತೆ ಅರ್ಹೇನಿಯಸ್ ತನ್ನ ಪುಸ್ತಕ `ವರ್ಲ್ಡ್ಸ್ ಇನ್ ದ ಮೇಕಿಂಗ್'ನಲ್ಲಿ ಒಂದು ವಾದ ಮುಂದಿಟ್ಟ. ಅದೇನೆಂದರೆ, ಈ ವಿಶ್ವದಲ್ಲಿ ಜೀವರಾಶಿ ಮೊದಲಿನಿಂದಲೂ ಇದ್ದೇ ಇದೆ ಹಾಗೂ ಅದು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಆಗಾಗ ವರ್ಗಾಯಿಸಲ್ಪಡುತ್ತಿರುತ್ತದೆ ಎಂಬುದು. ಇನ್ನು ಕೆಲವು ವಿಜ್ಞಾನಿಗಳು ಭೂಮಿಯಲ್ಲಿನ ಜೀವರಾಶಿಯ ಮೂಲ ಮಂಗಳಗ್ರಹವೇ ಎಂದು ಹೇಳುತ್ತಾರೆ. ಲಕ್ಷಾಂತರ ವರ್ಷಗಳ ಹಿಂದೆ ಮಂಗಳಗ್ರಹದಲ್ಲಿ ಜೀವರಾಶಿ ಇದ್ದು ಅದು ಈಗ ನಶಿಸಿಹೋಗಿದೆ. ಅಲ್ಲಿ ಜೀವರಾಶಿ ಇದ್ದಾಗ ಮಂಗಳ ಗ್ರಹಕ್ಕೆ ಯಾವುದಾದರೂ ಧೂಮಕೇತು ಅಥವಾ ನಕ್ಷತ್ರಕಾಯ ಅಪ್ಪಳಿಸಿ ಬೃಹತ್ ಪ್ರಮಾಣದಲ್ಲಿ ಮಂಗಳನ ಕಲ್ಲು ಮಣ್ಣು ಸಿಡಿಸಿರಬಹುದು. ಆ ರೀತಿ ಸಿಡಿದ ಕಲ್ಲು ಮಣ್ಣಿನ ಸ್ವಲ್ಪ ಭಾಗ ಭೂಮಿಯ ಕಕ್ಷೆಗೂ ಸೇರಿ ಅಲ್ಲೇ ಸುತ್ತುತ್ತಾ ಇದ್ದು ಕೊನೆಗೊಂದು ದಿನ ಭೂಮಿ ತಲುಪಿರಬಹುದು. ಆ ಶಿಲೆಗಳ ರಂಧ್ರಗಳಲ್ಲಿದ್ದಿರಬಹುದಾದ ಸೂಕ್ಷ್ಮಾಣುಜೀವಿಗಳೇ ಭೂಮಿಯ ಮೇಲಿನ ಜೀವವಿಕಾಸಕ್ಕೆ ನಾಂದಿಯಾಗಿರಬಹುದು. ಈಗಲೂ ಸಹ ಪ್ರತಿ ವರ್ಷ 500 ಕಿ.ಗ್ರಾಂನಷ್ಟು ಮಂಗಳ ಗ್ರಹದ ಶಿಲೆಗಳು ಭೂಮಿಯನ್ನು ತಲುಪುತ್ತಲೇ ಇವೆ. ಅದೇ ರೀತಿ ಈ ಹಿಂದೆ ಸಿಡಿದಿರಬಹುದಾದ ಭೂಮಿಯ ಶಿಲೆಗಳೂ ಮಂಗಳವನ್ನು ತಲುಪುತ್ತಲೂ ಇರಬಹುದು.


1984ರಲ್ಲಿ ಅಂಟಾರ್ಟಿಕಾದಲ್ಲಿ ಬ್ರಿಟಿಶ್ ವಿಜ್ಞಾನಿಗಳಿಗೆ ಉಲ್ಕಾಶಿಲೆಯ ಚೂರೊಂದು ಸಿಕ್ಕಿತು. ಅವರು ಅಧ್ಯಯನ ಮಾಡಿ ಆ ಚೂರು ಮಂಗಳ ಗ್ರಹದ್ದೆಂದೂ ಅದು ಮಂಗಳ ಗ್ರಹ ರಚನೆಯಾದ ಸ್ವಲ್ಪ ಸಮಯದ ನಂತರ ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಸಿಡಿದು 13000 ವರ್ಷಗಳ ಹಿಂದೆ ಭೂಮಿಗೆ ಬಿದ್ದಿದೆಯೆಂದು ತಿಳಿಸಿದರು. ಆ ಚೂರನ್ನು ಎಲಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಅದರಲ್ಲಿ ಭೂಮಿಯಲ್ಲಿನ ಬ್ಯಾಕ್ಟೀರಿಯಾ ತರಹದ ಸೂಕ್ಷ್ಮಾಣುಜೀವಿಯ `ಪಳೆಯುಳಿಕೆ' ಕಂಡುಬಂದಿತು. ಅಂತರರಾಷ್ಟ್ರೀಯ ವಾದವಿವಾದಗಳ ನಂತರ ಅದು ಯಾವುದೇ ಜೀವಿಯ ಪಳೆಯುಳಿಕೆ ಅಲ್ಲವೆಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ. ಮಂಗಳ ಗ್ರಹದ ಮೇಲ್ಮೈನ ಅಧ್ಯಯನದ ಮೂಲಕ ಈಗ ಯಾವುದೇ ರೀತಿಯ ಜೀವರಾಶಿ ಮಂಗಳನಲ್ಲಿ ಇಲ್ಲವೆಂದಿದ್ದರೂ ಸಹ, ಲಕ್ಷಾಂತರ ವರ್ಷಗಳ ಹಿಂದೆ ಅಲ್ಲಿ ಜೀವರಾಶಿ ಇದ್ದಿದ್ದಿರಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ.

ಮಂಗಳನ ಅಂಗಳದಲ್ಲಿ ಜೀವರಾಶಿ ಕಾಣಸಿಗದಿದ್ದರೂ ಮಂಗಳನ ಆಳದಲ್ಲಿ ಜೀವರಾಶಿ ಇರಬಹುದಾದ ಸಾಧ್ಯತೆಯಿದೆ. ಭೂಮಿಯ ಸಾಗರ ತಳದಲ್ಲಿ, ಹಲವಾರು ಕಿಲೋಮೀಟರ್ ಆಳದಲ್ಲಿ, ಸೂರ್ಯನ ಬೆಳಕೂ ಹೊಗದ, 100 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚು ಉಷ್ಣಾಂಶವಿರುವ ಅಗ್ನಿಪರ್ವತದ ಬಿರುಕುಗಳಲ್ಲಿಯೂ ಸೂಕ್ಷ್ಮಾಣುಜೀವಿಗಳು ಜೀವಿಸುತ್ತಿರುವುದು ಕಂಡುಬಂದಿದೆ. ಅಂತಹ ಅಗ್ನಿಪರ್ವತದ ಬಿರುಕುಗಳಿಂದ ಹೊರಸೂಸುವ ಗಂಧಕ ಹಾಗೂ ಇನ್ನಿತರ ರಾಸಾಯನಗಳು ನಮಗೆ ತಿಳಿದಿರುವ ಜೀವರಾಶಿಯನ್ನು ನಾಶಮಾಡಬಲ್ಲವು. ಆದರೆ ಇಂತಹ ಪರಿಸರದಲ್ಲೂ ಸಹ ಉಷ್ಣಾಪೇಕ್ಷಿ ಮತ್ತು ಆಮ್ಲಜನಕ ಬಯಸದ ಸೂಕ್ಷ್ಮಾಣುಜೀವಿಗಳು ಬದುಕುತ್ತಿವೆ. ನಮ್ಮ ಭೂಗರ್ಭದಲ್ಲಿ, ಅಧಿಕ ಉಷ್ಣಾಂಶದ ಪರಿಸರದಲ್ಲೂ ಸೂಕ್ಷ್ಮಾಣುಜೀವಿಗಳಿವೆ. ಹಾಗಿರುವಾಗ ಮಂಗಳನ ಆಳದಲ್ಲಿಯೂ ಸೂಕ್ಷ್ಮಾಣುಜೀವಿಗಳಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಗುರುಗ್ರಹದ ಉಪಗ್ರಹವಾದ ಯೂರೋಪ ನಮ್ಮ ಚಂದ್ರನಿಗಿಂತ ಚಿಕ್ಕದಾದ ಗ್ರಹ. ಆದರೆ ಅದರ ಮೇಲ್ಮೈ 150ರಿಂದ 300 ಕಿ.ಮೀ. ದಪ್ಪದ ಹಿಮದಿಂದ ಆವೃತವಾಗಿದೆ. ಅದರ ಕೆಳಗೆ ದ್ರವ ರೂಪದ ಸಾಗರವಿರಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಆ ನೀರಕೆಳಗೆ ಆ ಉಪಗ್ರಹದ ಕೆಂದ್ರದ ಉಷ್ಣತೆಯಿಂದಾಗಿ ಅಲ್ಲಿ ಜೀವ ವಿಕಾಸವಾಗಿರುವ ಸಾಧ್ಯತೆಯಿದೆ ಎನ್ನುತ್ತಾರೆ.

ವಿಶ್ವದ ಇನ್ನಿತರೆಡೆ ಯಾವುದಾದರೂ ನಾಗರಿಕತೆ ಇರುವುದು ತಿಳಿದುಬಂದಲ್ಲಿ ನಾವು ಅಲ್ಲಿಗೆ ಹೋಗಿ ಅವರನ್ನು ಭೇಟಿಯಾಗಿ ಕೈ ಕುಲುಕಿ ಬರಲು ಸಾಧ್ಯವೆ? ಈಗ ಲಭ್ಯವಿರುವ ನಮ್ಮ ತಂತ್ರeನದಲ್ಲಿ ಅದು ಸಾಧ್ಯವೇ ಇಲ್ಲ. ಏಕೆಂದರೆ, ಈ ವಿಶ್ವದಲ್ಲಿನ ನಕ್ಷತ್ರಗಳ ನಡುವಿನ ಅಂತರ ತೀರಾ ಅಗಾಧವಾದುದು. ನಾವು ಹತ್ತಿರದ ನಕ್ಷತ್ರದ ಗ್ರಹಗಳನ್ನು ತಲುಪಲೇ ಸಾವಿರಾರು ವರ್ಷಗಳ ಸಮಯ ಬೇಕಾಗುತ್ತದೆ. ಉದಾಹರಣೆಗೆ ನೊಡಿ, ಬೀಟಾ ಆಂಡ್ರೋಮೆಡ ಎನ್ನುವ ನಕ್ಷತ್ರ ನಮ್ಮಿಂದ 75 ಜ್ಯೋತಿರ್ವರ್ಷಗಳ ದೂರದಲ್ಲಿದೆ. 75 ಜ್ಯೋತಿರ್ವರ್ಷ ಎಂದರೆ ಬಾಹ್ಯಾಕಾಶದಲ್ಲಿ ಕೇವಲ ಒಂದು ಕಲ್ಲೆಸೆತದ ದೂರ ಅಷ್ಟೆ. ಒಂದು ಜ್ಯೋತಿರ್ವರ್ಷ ದೂರ ಎಂದರೂ ನಾವು ಅದನ್ನು ಕ್ರಮಿಸಲು ಬೆಳಕಿನ ವೇಗದಲ್ಲಿ ಚಲಿಸಿದರೂ ಒಂದು ವರ್ಷ ಸಮಯ ಬೇಕಾಗುತ್ತದೆ. ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿಲೋಮೀಟರುಗಳು. ಅಷ್ಟು ವೇಗದಲ್ಲಿ ಚಲಿಸುವ ಬಾಹ್ಯಾಕಾಶ ನೌಕೆಗಳನ್ನು ನಿರ್ಮಿಸುವುದು ಕನಸಿನ ಮಾತೇ ಸರಿ.

1972ರ ಮಾರ್ಚ್ 2ರಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನ್ಯಾಸಾ' ಪಯೊನೀರ್ 10 ಎಂಬ ಬಾಹ್ಯಾಕಾಶ ನೌಕೆಯನ್ನು ಅಂತರಿಕ್ಷಕ್ಕೆ ಉಡಾಯಿಸಿತು. ಅದನ್ನು 21 ತಿಂಗಳುಗಳ ಕಾಲ ಕಾರ್ಯನಿರ್ವಹಿಸುವಂತೆ ತಯಾರಿಸಲಾಗಿತ್ತು. ಆದರೆ ಅದು 30 ವರ್ಷಗಳಿಗೂ ಹೆಚ್ಚುಕಾಲ ತನ್ನ ಕಾರ್ಯ ನಿರ್ವಹಿಸಿದೆ. ಅದರ ವಿಶೇಷತೆಯೆಂದರೆ ಆ ನೌಕೆಯೆಂದೂ ಭೂಮಿಗೆ ವಾಪಸ್ಸು ಬರುವುದಿಲ್ಲ. ಅದು ಲಕ್ಷಾಂತರ ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ, ಭೂಮಿಯಿಂದ ದೂರ ದೂರ ಚಲಿಸುತ್ತಿರುತ್ತವೆ. ನಮ್ಮ ಸೌರವ್ಯೂಹದ ಗ್ರಹಗಳನ್ನು ನಾವು ಅರಿಯಲು ಈ ನೌಕೆ ಬಹಳಷ್ಟು ಸಹಕಾರಿಯಾಗಿವೆ. ಗ್ರಹಗಳ ಗುರುತ್ವಾಕರ್ಷಣ ಶಕ್ತಿಯನ್ನೇ ತಮ್ಮ ಇಂಧನವನ್ನಾಗಿಸಿಕೊಂಡು ಆ ನೌಕೆ ಈ ಸೌರವ್ಯೂಹವನ್ನೇ ಬಿಟ್ಟು ಹೊರಹೋಗಿದೆ. ನಮ್ಮ ಸೌರವ್ಯೂಹವನ್ನು ಬಿಟ್ಟು ಹೊರಹೋದ ಮೊಟ್ಟಮೊದಲ ಮಾನವ ನಿರ್ಮಿತ ನೌಕೆ ಇದಾಗಿದೆ. ಬಹುಶಃ ಮೂರು ಲಕ್ಷ ವರ್ಷಗಳ ನಂತರ ಅದು ಯಾವುದಾದರೂ ಅನ್ಯಗ್ರಹ ನಾಗರಿಕತೆಯಿದ್ದಲ್ಲಿ ಅದಕ್ಕೆ ದೊರಕಬಹುದು. ಇಲ್ಲದಿದ್ದಲ್ಲಿ ಮುಂದಿನ ಹತ್ತು ಲಕ್ಷ ವರ್ಷಗಳಲ್ಲಿ ಅದು ಹಾಗೆಯೇ ಸುಮಾರು ಹತ್ತು ನಕ್ಷತ್ರಗಳನ್ನು ಹಾದುಹೋಗುತ್ತದೆ. ನಮ್ಮ ಸೂರ್ಯ ಇನ್ನು ಐದು ಬಿಲಿಯನ್ ವರ್ಷಗಳಲ್ಲಿ ಕೆಂಪು ಕುಬ್ಜವಾಗಿ ನಮ್ಮ ಭೂಮಿ ನಾಶವಾದಾಗ ಅದು ಇನ್ನೂ ನಮ್ಮ ಹಾಲುಹಾದಿ ಆಕಾಶಗಂಗೆಯಲ್ಲಿ ತನ್ನ ಪ್ರಯಾಣ ಮುಂದುವರಿಸುತ್ತಲೇ ಇರುತ್ತದೆ.
ಅಂತರಿಕ್ಷದಲ್ಲಿ ಪಯೊನೀರ್ 10- ಕಲಾವಿದನೊಬ್ಬನ ಕಲ್ಪನೆ

ಪಯೊನೀರ್ 10 ಬಾಹ್ಯಾಕಾಶ ನೌಕೆಯಲ್ಲಿ 6 x 9 ಅಂಗುಲದ ಚಿನ್ನ ಲೇಪಿಸಿರುವ ಅಲ್ಯೂಮಿನಿಯಂ ಬಿಲ್ಲೆಯೊಂದನ್ನು ಇರಿಸಲಾಗಿದೆ. ಅದರ ಮೇಲೆ ಗಂಡು, ಹೆಣ್ಣಿನ ಚಿತ್ರವಿದೆ (ಚಿತ್ರ ನೋಡಿ), ಸೌರವ್ಯೂಹದ ಚಿತ್ರವೂ ಇದೆ. ಮನುಷ್ಯನ ಎತ್ತರ, ಗಾತ್ರದ ಪ್ರಮಾಣ ತಿಳಿಯಲೆಂದು ಅವರ ಚಿತ್ರವನ್ನು ಪಯೊನೀರ್ ನೌಕೆಯ ಚಿತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು ರಚಿಸಲಾಗಿದೆ. ಆ ನೌಕೆ ಸೌರವ್ಯೂಹ ಬಿಟ್ಟು ಹೊರಹೋಗಿ, ವಿಶ್ವದ ಬೇರೆ ಭಾಗದಲ್ಲಿ ಯಾವುದಾದರೂ ನಾಗರಿಕತೆಗೆ ಆ ನೌಕೆ ಸಿಕ್ಕಲ್ಲಿ ಅದರಲ್ಲಿನ ಈ ಬಿಲ್ಲೆಯಿಂದ ಮನುಷ್ಯನ ಬಗ್ಗೆ ಹಾಗೂ ಆ ನೌಕೆಯನ್ನು ಕಳುಹಿಸಿದವರು ಆ ಮನುಷ್ಯರೇ ಎಂಬುದನ್ನು ತಿಳಿಯಲೆಂದು ಆ ಬಿಲ್ಲೆಯನ್ನು ಇರಿಸಲಾಗಿದೆ. ಆ ಬಿಲ್ಲೆಯಲ್ಲಿನ ಮನುಷ್ಯನ ಚಿತ್ರದಲ್ಲಿ ಆತ ಒಳ್ಳೆಯದನ್ನು ಬಯಸುವ ಹಾಗೆ ಬಲಗೈಯನ್ನು ಮೇಲಕ್ಕೆ ಎತ್ತಿರುವಂತಿದೆ. ಆ ಚಿತ್ರವನ್ನು ಡಾ.ಕಾರ್ಲ್ ಸಾಗನ್ ಮತ್ತು ಡಾ.ಫ್ರಾಂಕ್ ಡ್ರೇಕ್ ವಿನ್ಯಾಸಗೊಳಿಸಿದ್ದಾರೆ ಮತ್ತು ಚಿತ್ರವನ್ನು ಲಿಂಡಾ ಸಾಲ್ಜ್ಮನ್ ಸಾಗನ್ ಬಿಡಿಸಿದ್ದಾರೆ. ಆ ಬಿಲ್ಲೆಯಲ್ಲಿನ ಗಂಡು ಮತ್ತು ಹೆಣ್ಣಿನ ಚಿತ್ರದ ಭೌತಿಕ ರೂಪವನ್ನು ನಮ್ಮ ಭೂಮಿಯ ಮೇಲಿನ ಸರಾಸರಿ ಮಾನವರ ಕಂಪ್ಯೂಟರ್ ವಿಶ್ಲೇಷಣೆಯಿಂದ ಪಡೆಯಲಾಗಿದೆ.


ಪಯೊನೀರ್ 10 ಇರಿಸಲಾಗಿರುವ ಬಿಲ್ಲೆ

ಅಕಸ್ಮಾತ್ ಆ ಬಿಲ್ಲೆ ಲಕ್ಷಾಂತರ ವರ್ಷಗಳನಂತರ ಅನ್ಯಗ್ರಹ ಜೀವಿಗಳಿಗೆ ಸಿಕ್ಕಲ್ಲಿ ಅವರು ನಮ್ಮನ್ನು ಮತ್ತು ಈ ಭೂಮಿಯನ್ನು ಅರಿತುಕೊಳ್ಳಲು ಸಾಧ್ಯವೆ? ಆ ಬಿಲ್ಲೆಯನ್ನು ಅರ್ಥಮಾಡಿಕೊಳ್ಳುವ ಮೊದಲ ಹೆಜ್ಜೆ ಜಲಜನಕದ ರಚನೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿದೆ. ಜಲಜನಕ ಈ ವಿಶ್ವದಲ್ಲಿ ಇರುವ ಅತ್ಯಂತ ಸಾಮಾನ್ಯ ಧಾತು. ಇದನ್ನು ಬಿಲ್ಲೆಯ ಎಡಭಾಗದ ಚಿತ್ರರೂಪದಲ್ಲಿ ನ್ಯೂಟ್ರಲ್ ಅಟಾಮಿಕ್ ಜಲಜನಕದ ಹೈಪರ್ಫೈನ್ ರೂಪಾಂತರವನ್ನು ತೋರಿಸಲಾಗಿದೆ. ವೈಜ್ಞಾನಿಕವಾಗಿ ಮುಂದುವರಿದ ಹಾಗೂ ಜಲಜನಕದ ಬಗ್ಗೆ ತಿಳಿದಿರುವ ನಾಗರಿಕತೆಗೆ ಈ ಸಂದೇಶ ಸುಲಭವಾಗಿ ಅರ್ಥವಾಗುತ್ತದೆ ಎನ್ನುವುದು ಇಲ್ಲಿನ ವಿಜ್ಞಾನಿಗಳ ನಂಬಿಕೆ. ಆ ಬಿಲ್ಲೆಯಲ್ಲಿ ನಮ್ಮ ಸೌರವ್ಯೂಹದ ಗ್ರಹಗಳು ಹಾಗೂ ಅದರಲ್ಲಿ ಭೂಮಿಯ ಸ್ಥಾನ, ಸೂರ್ಯನ ಸ್ಥಾನ ಇತ್ಯಾದಿಗಳ ಬಗೆಗೆ ಸಾಂಕೇತಿಕವಾಗಿ ಚಿತ್ರಿಸಲಾಗಿದೆ.

ಈ ಪಯೋನೀರ್ 10 ಕಳುಹಿಸಿದ ನಂತರ ಬಹಳಷ್ಟು ವಾದವಿವಾದಗಳು ನಡೆದವು. ಈ ಬಿಲ್ಲೆಯಲ್ಲಿ ನಮ್ಮ ಸೌರವ್ಯೂಹದ ಸ್ಥಾನವನ್ನು ಸುಲಭವಾಗಿ ತಿಳಿಸಿಕೊಟ್ಟುಬಿಟ್ಟಿದ್ದೇವೆ. ಯಾರಾದರೂ ಅನ್ಯಗ್ರಹ ಜೀವಿಗಳು ನಮಗಿಂತ ವೈಜ್ಞಾನಿಕವಾಗಿ ಮುಂದುವರಿದವರಿದ್ದಲ್ಲಿ ಅವರಿಗೆ ನಮ್ಮ ವಿಳಾಸವನ್ನು ಕೊಟ್ಟುಬಿಟ್ಟಿರುವುದರಿಂದ ಅವರು ನಮ್ಮಲ್ಲಿಗೆ ಬಂದು ನಮ್ಮ ಮೇಲೆ ದಾಳಿ ಮಾಡಬಹುದು, ಮನುಷ್ಯರನ್ನು ತಮ್ಮ ಪ್ರಯೋಗಗಳಿಗೆ ಬಲಿಪಶುಗಳನ್ನಾಗಿ ಮಾಡಿಕೊಳ್ಳಬಹುದು ಎಂದರು ಕೆಲವರು. ನಾವು ರೇಡಿಯೋ, ವೈರ್ಲೆಸ್, ಟೆಲಿವಿಶನ್, ರಾಡಾರ್ ಮುಂತಾದ ಸಂಕೇತಗಳ ಬಿತ್ತರ ಆರಂಭವಾದಾಗಲೇ ನಮ್ಮ ವಿಳಾಸವನ್ನು ಬಿಟ್ಟುಕೊಟ್ಟಿದ್ದೇವೆ. ನಮ್ಮ ಭೂಮಿಯಿಂದ ಹೊರಟ ಅವು ಈಗಾಗಲೇ ಎಲ್ಲೆಲ್ಲಿಗೆ ತಲುಪಿದೆಯೋ ಯಾರಿಗೆ ಗೊತ್ತು? ಎಂದರು ಇತರರು. ಮೊದಮೊದಲಿಗೆ ದೂರದರ್ಶನದಲ್ಲಿ ಬಿತ್ತರವಾದ `ಐ ಲವ್ ಲೂಸಿ' ಎಂಬ ದೂರದರ್ಶನದ ಕಾರ್ಯಕ್ರಮಗಳು ಈಗಾಗಲೇ ಆರು ಸಾವಿರ ನಕ್ಷತ್ರ ಸಮೂಹಗಳನ್ನು ಹಾದುಹೋಗಿದೆಯೆಂದು ನ್ಯೂ ಸೈಂಟಿಸ್ಟ್ ಪತ್ರಿಕೆ ವರದಿ ಮಾಡಿದೆ. ಆ ತರಂಗಗಳು ದೂರ ಹೋದಂತೆ ದುರ್ಬಲವಾಗುವುದಾದರೂ ಅಲ್ಲಿ ಇರಬಹುದಾದ ಅನ್ಯಜೀವಿಗಳು ನಮಗಿಂತ ತಂತ್ರಜ್ಞಾನದಲ್ಲಿ ಮುಂದುವರಿದವರಾಗಿದ್ದಲ್ಲಿ ದುರ್ಬಲ ಮತ್ತು ಕ್ಷೀಣ ತರಂಗಗಳನ್ನು ಸಹ ಗ್ರಹಿಸಬಲ್ಲರು. ಆ ಬಿಲ್ಲೆಯಲ್ಲಿ ಭೂಮಿಯ ಸ್ಥಾನವನ್ನು ಹಾಗೂ ಅದರಿಂದ ಉಪಗ್ರಹ ಹೊರಟಿದೆ ಎಂದು ತೋರಿಸಲು ಬಾಣದ ಗುರುತನ್ನು ಉಪಯೋಗಿಸಿದ್ದೇವೆ. ಭೂಮಿಯ ಮೇಲೆ ಮಾನವನ ವಿಕಾಸದ ಹಾದಿಯಲ್ಲಿ ಅವನು ಬಿಲ್ಲು ಬಾಣಗಳನ್ನು ಉಪಯೋಗಿಸಿರುವುದರಿಂದ ನಮಗೆ ಬಾಣವೆಂದರೇನೆಂದು ತಿಳಿದಿದೆ. ಆ ಬಿಲ್ಲೆಯನ್ನು ಅನುವಾದಿಸಲು ಯತ್ನಿಸುವ ಅನ್ಯಗ್ರಹ ಜೀವಿಗಳೂ ಸಹ ಅದೇ ರೀತಿ ವಿಕಾಸ ಹೊಂದಿದ್ದಲ್ಲಿ ಹಾಗೂ ಬಿಲ್ಲು ಬಾಣಗಳನ್ನು ಬಳಸಿದ್ದಲ್ಲಿ ಅವರಿಗೆ ಅದು ಅರ್ಥವಾಗುತ್ತದೆ, ಇಲ್ಲದಿದ್ದರೆ ಅರ್ಥವೇ ಆಗುವುದಿಲ್ಲ ಎಂದರು ಕೆಲವರು. ಕೆಲವು ಮಹಿಳಾ ಸಂಘಟನೆಗಳು ಆ ಬಿಲ್ಲೆಯಲ್ಲಿ ಹೆಣ್ಣಿನ ಜನನಾಂಗಗಳನ್ನು ಸರಿಯಾಗಿ ಚಿತ್ರಿಸಿಲ್ಲ, ಅನ್ಯಗ್ರಹ ಜೀವಿಗಳಿಗೆ ಹೆಣ್ಣಿನ ದೇಹರಚನೆಯ ಬಗೆಗೆ ತಪ್ಪುಕಲ್ಪನೆ ಬರಬಹುದೆಂದರು!

ಹಾರುವ ತಟ್ಟೆಗಳು
ಹಾರುವ ತಟ್ಟೆಗಳು ಅಥವಾ ಗುರುತಿಸಲಾಗದ ಹಾರುವ ವಸ್ತುಗಳ ಮೂಲಕ ಅನ್ಯಗ್ರಹ ಜೀವಿಗಳು ಭೂಮಿಗೆ ಭೇಟಿ ನೀಡುತ್ತಿದ್ದಾರೆಂದು ಬಹಳಷ್ಟು ಜನ ನಂಬಿದ್ದಾರೆ. ಎರಿಕ್ ವಾನ್ ಡೆನಿಕನ್ ಎಂಬ ಲೇಖಕನ ಪುಸ್ತಕಗಳು (ಅಕಾರ್ಡಿಂಗ್ ಟು ದ ಎವಿಡೆನ್ಸ್, ಚಾರಿಯಟ್ಸ್ ಆಫ್ ಗಾಡ್ಸ್, ಮುಂತಾದವು) ಬಹಳಷ್ಟು ಜನಪ್ರಿಯವಾಗಿ ಚರ್ಚೆಗೆ ಗ್ರಾಸವಾಗಿದ್ದವು. ಆತನ ಪ್ರಕಾರ ಭೂಮಿಯಲ್ಲಿ ಜೀವ ಬಿತ್ತಿರುವುದೇ ಅನ್ಯಗ್ರಹ ಜೀವಿಗಳು. ಈಗಲೂ ಆ ಜೀವಿಗಳುಅವರು ಭೂಮಿಗೆ ಭೇಟಿ ನೀಡುತ್ತಲೇ ಇವೆದ್ದಾರೆ. ಅಲ್ಲದೆ ಇಲ್ಲಿನ ಮಹಾನ್ ರಚನೆಗಳಾದಂತಹ ಈಜಿಪ್ಟ್ನ ಪಿರಮಿಡ್ಗಳು, ಲ್ಯಾಟಿನ್ ಅಮೆರಿಕಾದಲ್ಲಿನ ಪಿರಮಿಡ್ಗಳು, ತಂಜಾವೂರಿನ ಬೃಹದೀಶ್ವರ ದೇವಾಲಯ, ಕಾಶ್ಮೀರದ ಸೂರ್ಯದೇವಾಲಯ, ನಾಜ್ಕಾದ ಬೃಹತ್ ರೇಖಾ ಚಿತ್ರಗಳು, ಆ ರೀತಿಯ ಇನ್ನೂ ಹತ್ತು ಹಲವಾರು ರಚನೆಗಳನ್ನು ಅನ್ಯಗ್ರಹ ಜೀವಿಗಳ ಸಹಾಯದಿಂದಲೇ ನಿರ್ಮಿಸಲಾಗಿದೆ, ಇಲ್ಲದಿದ್ದಲ್ಲಿ ಮೂರು ನಾಲ್ಕು ಸಾವಿರ ವರ್ಷಗಳ ಹಿಂದಿನ ಜನರಿಗೆ ಅವುಗಳನ್ನು ನಿರ್ಮಿಸುವ ತಂತ್ರಜ್ಞಾನವೆಲ್ಲಿತ್ತು ಎಂದು ಪ್ರಶ್ನಿಸುತ್ತಾನೆ ಆತ. ಆದರೆ ಎರಿಕ್ ವಾನ್ ಡೆನಿಕನ್ನ ವಾದಗಳೆಲ್ಲವನ್ನೂ ತಿರಸ್ಕರಿಸುವ ವಿಜ್ಞಾನಿಗಳು ಆತ ಡಾರ್ವಿನ್ನ ಜೀವವಿಕಾಸವಾದವನ್ನು ಸುಳ್ಳು ಎಂದು ಹೇಳುವ ಹಾಗೂ ಧಾರ್ಮಿಕ ಸೃಷ್ಟಿವಾದವನ್ನು ಪುಷ್ಟೀಕರಿಸುವ ಪ್ರಯತ್ನವನ್ನಷ್ಟೇ ಮಾಡುತ್ತಿದ್ದಾನೆ ಎನ್ನುತ್ತಾರೆ. ಎರಿಕ್ ವಾಕ್ ಡೆನಿಕನ್ನ ಬಹುಪಾಲು ಎಲ್ಲಾ ವಾದಗಳನ್ನು ಸುಳ್ಳೆಂದು ವಿಜ್ಞಾನಿಗಳು ವೈಜ್ಞಾನಿಕವಾಗಿ ರುಜುವಾತುಪಡಿಸಿದ್ದಾರೆ. ತಾನು ನೀಡಿದ್ದ ಎಷ್ಟೋ ಪುರಾವೆಗಳು ಸುಳ್ಳೆಂದು ಆತನೇ ಸ್ವತಃ ಒಪ್ಪಿಕೊಂಡಿದ್ದಾನೆ.

ಹಾರುವ ತಟ್ಟೆಗಳನ್ನು ಕಂಡವರಿದ್ದಾರೆಂದೂ, ಹಾಗೂ ಹಾರುವ ತಟ್ಟೆಗಳಲ್ಲಿನ ಅನ್ಯಗ್ರಹ ಜೀವಿಗಳು ಮನುಷ್ಯರನ್ನು ಅಪಹರಿಸಿ ಅವರ ಪ್ರಯೋಗಗಳಲ್ಲಿ ಬಳಸಿಕೊಂಡಿದ್ದಾರೆಂದು ಹೇಳುವ ವರದಿಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ವಿಜ್ಞಾನಿಗಳ ಪ್ರಕಾರ ಆ ರೀತಿಯ `ಹಾರುವ ತಟ್ಟೆಗಳನ್ನು' ಹಾಗೂ ಅಪಹರಣದ ವರದಿಗಳನ್ನು ವೈಜ್ಞಾನಿಕವಾಗಿ ವಿವರಿಸಿ ಹೇಳಬಹುದು. ಬಹಳಷ್ಟು ಸಾರಿ ಹಾರುವ ತಟ್ಟೆಗಳು ವಿಜ್ಞಾನಿಗಳು ಹಾರಿಸಿರುವ ಉಪಗ್ರಹಗಳು, ವಿಮಾನಗಳು, ವೈಜ್ಞಾನಿಕ ಪ್ರಯೋಗಗಳ ಬಲೂನುಗಳು, ಕೆಲವೊಮ್ಮೆ ಮೋಡಗಳ ರಚನೆಗಳು ಇತ್ಯಾದಿಗಳಾಗಿರುತ್ತವೆ. ಆದರೂ ಸದ್ಯಕ್ಕೆ ಇನ್ನೂ ವಿವರಿಸಲಾಗದ `ಹಾರುವ ತಟ್ಟೆ'ಗಳ ವೀಕ್ಷಣೆಗಳು ಮತ್ತು ಅನುಭವಗಳೂ ಇವೆ. ಅತಿ ಹೆಚ್ಚು `ಗುರುತಿಸಲಾಗದ ಹಾರುವ ತಟ್ಟೆ'ಗಳ ವೀಕ್ಷಣೆಗಳು ಅಮೆರಿಕ ಮತ್ತು ರಷ್ಯಾಗಳ ನಡುವಿನ ಶೀತಲ ಸಮರದ ಸಮಯದಲ್ಲಿ ಆಗಿರುವುದು ಸೋಜಿಗದ ವಿಷಯ.

ಹಾರುವ ತಟ್ಟೆಗಳ ಬಗೆಗೆ ಮೊದಲು ವರದಿಯಾಗಿದ್ದು ಜೂನ್ 1947ರಲ್ಲಿ. ಕೆನೆತ್ ಅರ್ನಾಲ್ಡ್ ಎಂಬ ಪೈಲಟ್ ಒಂದು ದಿನ ವಾಷಿಂಗ್ಟನ್ನಲ್ಲಿನ ಮೌಂಟ್ ರೈನಿಯರ್ ಬಳಿ ನಿಗೂಢ ಹೊಳೆಯುವ ತಟ್ಟೆಗಳಂತಹ ಆಕಾರಗಳನ್ನು ಕಂಡ. ಅದನ್ನು ವರದಿ ಮಾಡಿದ ಪತ್ರಿಕೆಗಳು `ಹೊಳೆಯುವ ತಟ್ಟೆಗಳಂತಹ ಆಕಾರ' ಎಂದು ಬರೆದದ್ದರಿಂದ ಹಾರುವ ತಟ್ಟೆಗಳು ಎನ್ನುವ ಪದ ಉಳಿದುಕೊಂಡುಬಂದಿದೆ. 1948ರಲ್ಲಿ ಅಮೆರಿಕದ ಏರ್ ಫೋರ್ಸ್ ಹಾರುವ ತಟ್ಟೆಗಳ ಹಲವಾರು ವರದಿಗಳ ಬಗೆಗೆ ತನಿಖೆ ಆರಂಭಿಸಿತು. ಹಲವಾರು ಹೆಸರುಗಳನ್ನು ಬದಲಿಸಿಕೊಂಡ ಆ ತನಿಖೆ ಕೊನೆಗೆ ಪ್ರಾಜೆಕ್ಟ್ ಬ್ಲೂ ಬುಕ್ ಹೆಸರಿನಲ್ಲಿ ಮುಂದುವರಿಯಿತು. 1952ರಿಂದ 1969ರವರೆಗಿನ 12618 ವರದಿಗಳ ಬಗೆಗೆ ತನಿಖೆ ನಡೆಸಿ 1969ರ ಡಿಸೆಂಬರ್ನಲ್ಲಿ ಆ ತನಿಖೆಯನ್ನು ಅಂತ್ಯಗೊಳಿಸಿತು. ಅದು ಸಲ್ಲಿಸಿದ ವರದಿಯ ಸಾರಾಂಶ ಈ ಮುಂದಿನಂತಿದೆ:
(1) ಕಂಡ ಯಾವುದೇ ಹಾರುವ ತಟ್ಟೆಗಳ ವರದಿಗಳು ರಾಷ್ಟ್ರೀಯ ಸುಭದ್ರತೆಗೆ ಯಾವುದೇ ರೀತಿಯಲ್ಲಿ ಕಂಟಕಕಾರಿಯೆಂದು ಕಂಡುಬಂದಿಲ್ಲ. (2) `ಗುರುತಿಸಲಾಗದ' ಎಂದಿರುವ ಯಾವುದೇ ವೀಕ್ಷಣೆ ಅಥವಾ ಅನುಭವ ಪ್ರಸ್ತುತ ತಾಂತ್ರಿಕ ಮತ್ತು ವೈಜ್ಞಾನಿಕ ಗ್ರಹಿಕೆಗೆ ಅಥವಾ ವಿವರಣೆಗೆ ನಿಲುಕದಂಥವಲ್ಲ (3) `ಗುರುತಿಸಲಾಗದ' ಎಂದಿರುವ ಯಾವುದೇ ಅಂತರಿಕ್ಷ ನೌಕೆಗಳ ವೀಕ್ಷಣೆ ಅನ್ಯಗ್ರಹ ಜೀವಿಗಳದ್ದು ಎನ್ನಲು ಯಾವುದೇ ಪುರಾವೆಗಳಿಲ್ಲ.

ಪ್ರಾಜೆಕ್ಟ್ ಬ್ಲೂ ಬುಕ್ನಲ್ಲಿ 12618 ವೀಕ್ಷಣೆಗಳನ್ನು ಅಧ್ಯಯನ ಮಾಡಿದ್ದರೂ ಆ ಪ್ರಾಜೆಕ್ಟ್ ಅಂತ್ಯಗೊಂಡಾಗ ಅವುಗಳಲ್ಲಿ 701 ವೀಕ್ಷಣೆಗಳು `ವಿವರಿಸಲಾಗದೆ' ಉಳಿದಿದ್ದವು. `ಗುರುತಿಸಲಾಗದ ಹಾರುವ ತಟ್ಟೆ'ಗಳ ವೀಕ್ಷಣೆಗಳನ್ನು ತರ್ಕಬದ್ಧವಾಗಿ ವಿವರಿಸಲೂ ಸಾಧ್ಯವಿಲ್ಲವೆನ್ನುತ್ತಾರೆ ವಿಜ್ಞಾನಿಗಳು. ಈ ವಿಶ್ವದ ಇತರೆಡೆ ಜೀವ ವಿಕಾಸವಾಗಿರಬಹುದು ಹಾಗೂ ತಾಂತ್ರಿಕವಾಗಿ ಮುಂದುವರಿದ ನಾಗರಿಕತೆಗಳಿರಬಹುದು. ಆದರೆ ಅಂಥಹ ಜೀವಿಗಳು ಭೂಮಿಗೆ ಭೇಟಿ ನೀಡಿದಾಗ ಆ ರೀತಿಯ ವೈಜ್ಞಾನಿಕವಾಗಿ ಮುಂದುವರಿದ ನಾಗರಿಕತೆ ಈ ರೀತಿ ಕಳ್ಳಕಳ್ಳಗೆ ವಿಜ್ಞಾನಿಗಳನ್ನು ಬಿಟ್ಟು ಇತರರ ಕಣ್ಣಿಗೆ ಬೀಳುವುದೇಕೆ? ನಾವು ಅರ್ಥಮಾಡಿಕೊಂಡಿರುವ ಭೌತಶಾಸ್ತ್ರದ ತತ್ವಗಳ ಅನ್ವಯ ಈ ರೀತಿಯ ಅಂತರಿಕ್ಷ ಯಾನ ಅತ್ಯಂತ ಕಷ್ಟಸಾಧ್ಯವಾದದ್ದು. ಆ ರೀತಿಯ ಯಾನವನ್ನು ಸಾಧಿಸಿರುವ ಅನ್ಯಗ್ರಹ ಜೀವಿಗಳು ಭೂಮಿಗೆ ಬರದೆ ತಾವು ಇರುವೆಡೆಯಿಂದಲೇ ನಮ್ಮ ಅರಿವಿಗೆ ಬರದಂತೆ ಭೂಮಿಯನ್ನು ಹಾಗೂ ಭೂಮಿಯ ಮೇಲಿನ ಜೀವರಾಶಿಯನ್ನು ಅಧ್ಯಯನ ಮಾಡಬಲ್ಲ ತಂತ್ರಜ್ಞಾನವನ್ನು ಹೊಂದಿರುತ್ತವೆ. ಆದರೆ ಅವರು ನಮ್ಮ ಬಳಿಗೆ ಬಂದು ನಮ್ಮನ್ನು ಹತ್ತಿರದಿಂದಲೇ ಅಧ್ಯಯನ ಮಾಡಬೇಕಾದಲ್ಲಿ ಖಂಡಿತವಾಗಿಯೂ ಅವರು ಜನನಿಬಿಡ ಪ್ರದೇಶಗಳಲ್ಲಿ ಇಳಿದು ಬರುತ್ತಿದ್ದರು; ವಿಜ್ಞಾನಿಗಳು ಅಥವಾ ಇತರ ಅಧಿಕಾರವಿರುವವರನ್ನು ಸಂಪರ್ಕಿಸುತ್ತಿದ್ದರು. ಯಾವುದೇ ತಾಂತ್ರಿಕವಾಗಿ ಮುಂದುವರಿದ ಅನ್ಯಗ್ರಹ ಜೀವಿ ಆ ರೀತಿ ಮಾಡಿಲ್ಲ. ಏಕೆ ಮನುಷ್ಯರೆಂದರೆ ಅವುಗಳಿಗೆ ಅಷ್ಟು ನಿರಾಸಕ್ತಿಯೆ?

ಒಟ್ಟಾರೆಯಾಗಿ ಮನುಷ್ಯನಿಗೆ ಮೊದಲಿನಿಂದಲೂ ನಿಗೂಢಗಳೆಂದರೆ ಎಲ್ಲಿಲ್ಲದ ಆಸಕ್ತಿ. ಮ್ಯಾಜಿಕ್ ಶೋನಲ್ಲಿ ಅದು `ಕಣ್ಣುಕಟ್ಟೆಂದು' ಹಾಗೂ ಅದು ಯಕ್ಷಿಣಿಗಾರನ `ಕೈಚಳಕ'ವೆಂದು ತಿಳಿದಿದ್ದರೂ ಅದನ್ನು ಮಕ್ಕಳ ಜೊತೆಗೆ ದೊಡ್ಡವರೂ ಸಹ ನೋಡಿ ನಿಬ್ಬೆರಗಾಗುತ್ತಾರೆ. ಅದೇ ರೀತಿ ಇಂದಿಗೂ ಕತೆಗಾರರು ಇಲ್ಲದ ದೆವ್ವ, ಪ್ರೇತಾತ್ಮಗಳ, ನಿಗೂಢಗಳ ಕತೆ ಹೇಳಿ ಕೇಳುಗರ, ಓದುಗರನ್ನು ಕುತೂಹಲದ, ಹೆದರಿಕೆಯ ಜಗತ್ತಿನೊಳಗೆ ಕರೆದೊಯ್ಯುತ್ತಾರೆ. ಅದೇ ರೀತಿ `ಗುರುತಿಸಲಾಗದ ಹಾರುವ ತಟ್ಟೆ'ಗಳ ಕತೆಗಳು ಜನರ ನಿಗೂಢತೆಯ, ಕುತೂಹಲದ ದಾಹವನ್ನು ತಣಿಸುತ್ತಿವೆ.

ಅನ್ಯಗ್ರಹ ಜೀವಿಗಳು ನೋಡಲು ಹೇಗಿರಬಹುದು?
ಅನ್ಯಗ್ರಹ ಜೀವಿಗಳು ಇರುವುದಾದಲ್ಲಿ ಅವು ಹೇಗಿರಬಹುದೆಂಬುದು ಯಾರಿಗೂ ತಿಳಿದಿಲ್ಲ. ಅನ್ಯಗ್ರಹ ಜೀವಿಗಳ ಬಗೆಗೆ ಬಂದಿರುವ ಹಲವಾರು ಚಿತ್ರಗಳಲ್ಲಿ ಅನ್ಯಗ್ರಹ ಜೀವಿಗಳನ್ನು ಅವುಗಳನ್ನು ಎಷ್ಟೇ ಚಿತ್ರವಿಚಿತ್ರವಾಗಿ ಚಿತ್ರಿಸಿದ್ದರೂ ಅವು ಮೂಲಭೂತವಾಗಿ ಬಹುಪಾಲು ಮನುಷ್ಯರನ್ನೇ ಹೋಲುತ್ತವೆ- ಅವುಗಳಿಗೆ ಕಣ್ಣುಗಳಿರುತ್ತವೆ, ಕೈಕಾಲುಗಳಿರುತ್ತವೆ, ಹಲ್ಲುಗಳಿರುತ್ತವೆ, ಕ್ರೂರಿಗಳಾಗಿರುತ್ತವೆ - ಅಂದರೆ ಅನ್ಯಗ್ರಹ ಜೀವಿಗಳು ನಮ್ಮ ಹಾಗೆಯೇ ಹಾಗೂ ಈ ಭೂಮಿಯ ಮೇಲೆ ವಿಕಾಸಗೊಂಡಿರುವ ಎಲ್ಲ ಜೀವಿಗಳಲ್ಲಿಯೂ ನಾವೇ ಸರ್ವೋತ್ತಮರು ಎನ್ನುವಂತೆ ನಮ್ಮ ರೀತಿಯೇ ಇರಬೇಕೆಂದು ನಾವು ನಿರ್ಧರಿಸಿಕೊಂಡಂತಿದೆ. ಅನ್ಯಗ್ರಹ ಜೀವಿಗಳ ಬಗೆಗೆ ಬಂದ ಮೊಟ್ಟ ಮೊದಲ ಚಲನಚಿತ್ರ ಹ್ಯಾರಿ ಬೇಟ್ಸ್ ಎಂಬಾತನ ಸಣ್ಣ ಕತೆಯೊಂದನ್ನು ಆಧರಿಸಿ 1951ರಲ್ಲಿ ತೆಗೆದ `ದ ಡೇ ದ ಅರ್ಥ್ ಸ್ಟುಡ್ ಸ್ಟಿಲ್'. ಅದನ್ನೇ 2008ರಲ್ಲಿ ಕೊಂಚ ಆಧುನಿಕೀಕರಿಸಿ ತೆಗೆಯಲಾಗಿದೆ. ಅದರಲ್ಲಿ ಭೂಮಿಗೆ ಅನ್ಯಗ್ರಹ ಜೀವಿಗಳ ಪ್ರತಿನಿಧಿಯಾಗಿ ಬರುವ `ಹ್ಯೂಮನಾಯ್ಡ್' ಕ್ಲಾಟು ಮತ್ತು ರೋಬೋ ಭೂಮಿಯ ಮೇಲೆ ಆಕ್ರಮಣ ಮಾಡುವುದಿಲ್ಲ, ಬದಲಿಗೆ ಮಾನವರು ಅಣ್ವಸ್ತ್ರಗಳ ಅನ್ವೇಷಣೆಯಿಂದಾಗಿ ಹಾಗೂ ಪರಸ್ಪರ ದ್ವೇಷದಿಂದಾಗಿ ವಿನಾಶದ ಅಂಚಿನಲ್ಲಿದ್ದು ಶಾಂತಿಯುತವಾಗಿ ಬದುಕಲು ತಿಳಿಸಲು ಬಂದಿರುತ್ತದೆ; ಯಾವುದೇ `ನಾಗರಿಕ' ಆಕಾಶಗಂಗೆಯಲ್ಲಿ ಮಾನವರಂತಹ ಆಕ್ರಮಣಶೀಲ ಪ್ರಭೇದಗಳಿಗೆ ಸ್ಥಾನವಿಲ್ಲವೆಂದು ಎಚ್ಚರಿಕೆ ನೀಡಲು ಬಂದಿರುತ್ತದೆ.

ಎಚ್.ಜಿ.ವೆಲ್ಸ್ರವರ 1898ರ `ವಾರ್ ಆಫ್ ದ ವರ್ಲ್ಸ್ಡ್' ಕಾದಂಬರಿ ಆಧರಿಸಿ ಅದೇ ಹೆಸರಿನ ಚಲನಚಿತ್ರಗಳು ಬಂದಿವೆ. ಭೂಮಿಯ ಮೇಲೆ ಆಕ್ರಮಣ ನಡೆಸುವ ಮಂಗಳಗ್ರಹ ವಾಸಿಗಳು ಕೊನೆಗೆ ಭೂಮಿಯ ಮೇಲಿನ ಬ್ಯಾಕ್ಟೀರಿಯಾಗಳ ಸೋಂಕಿಗೆ ಬಲಿಯಾಗಿ ನಾಶಹೊಂದುತ್ತವೆ. ಸ್ಟೀವನ್ ಸ್ಪಿಲ್ಬರ್ಗ್ನ `ಕ್ಲೋಸ್ ಎನ್ಕೌಂಟರ್ಸ್ ಆಫ್ ದ ಥರ್ಡ್ ಕೈಂಡ್' ಮತ್ತು `ಇ.ಟಿ. ದ ಎಕ್ಸ್ಟ್ರಾಟೆರೆಸ್ಟ್ರಿಯಲ್' ಅನ್ಯಗ್ರಹ ಜೀವಿಗಳ ಬಗೆಗಿನ ಅತ್ಯಂತ ಜನಪ್ರಿಯ ಚಲನಚಿತ್ರಗಳು. ಅನ್ಯಗ್ರಹ ಜೀವಿಗಳನ್ನು ಅತ್ಯಂತ ಕ್ರೂರವಾಗಿ ಚಿತ್ರಿಸಿರುವ ಚಲನಚಿತ್ರಗಳೆಂದರೆ `ಏಲಿಯನ್', `ಪ್ರಿಡೇಟರ್' ಮುಂತಾದವು.

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅನ್ಯಗ್ರಹ ಜೀವಿಗಳು ಭೂಮಿಗೇನಾದರೂ ಭೇಟಿ ನೀಡಿದಲ್ಲಿ ನಾವು ಅತ್ಯಂತ ಎಚ್ಚರದಿಂದಿರಬೇಕೆಂದಿದ್ದಾರೆ. ಅಂತಹ ಜೀವಿಗಳು ಭೂಮಿಯವರೆಗೂ ಬರಬಲ್ಲವರೆಂದರೆ ಅವರದು ತಾಂತ್ರಿಕವಾಗಿ ಅತ್ಯಂತ ಮುಂದುವರಿದ ನಾಗರಿಕತೆಯೇ ಆಗಿರುತ್ತದೆ. ಅಮೆರಿಕಕ್ಕೆ ಯೂರೋಪಿಯನ್ನರು ಕಾಲಿಟ್ಟಾಗ ಅಲ್ಲಿನ ಮೂಲನಿವಾಸಿಗಳ ಕತೆ ಏನಾಯಿತು? ಅದೇ ರೀತಿ ನಮ್ಮ ಕತೆಯೂ ಆಗುತ್ತದೆ ಎಂದು ಅವರ ಎಚ್ಚರ ನೀಡಿದ್ದಾರೆ. ಹಾಗಾಗಿ ಹಲವಾರು ವಿಜ್ಞಾನಿಗಳು ಆ ರೀತಿ ಭೂಮಿಯಿಂದ ಯಾವುದೇ ತರಂಗಗಳು ಅಂತರಿಕ್ಷಕ್ಕೆ ಹೋಗದಂತೆ ತಡೆಯಬೇಕೆಂದು ಸಲಹೆ ನೀಡಿದ್ದಾರೆ. ಆದರೆ ಅದಕ್ಕೆ ಈಗಾಗಲೇ ತುಂಬಾ ತಡವಾಗಿದೆ!

ಮನೋವಾದಲ್ಲಿನ ಹವಾಯ್ ವಿಶ್ವವಿದ್ಯಾನಿಲಯದ ಬೆನ್ ಫಿನ್ನೆ ಎಂಬ ಮಾನವಶಾಸ್ತ್ರಜ್ಞ ಅನ್ಯಗ್ರಹ ಜೀವಿಗಳೊಂದಿಗಿನ ಸಂಪರ್ಕದ ಬಗೆಗೆ ಆಧುನಿಕ ಮಾನವ `ಅತೀವ ಆತಂಕ'ಗೊಂಡಿದ್ದಾನೆ ಎನ್ನುತ್ತಾರೆ. ಅನ್ಯಗ್ರಹ ಜೀವಿಗಳು ಕ್ರೂರಿಗಳಾಗಿರುತ್ತಾರೆ ನಮ್ಮನ್ನು ಚಿತ್ರಹಿಂಸೆ ನೀಡಿ ಕೊಂದುಬಿಡುತ್ತಾರೆ, ಇತ್ಯಾದಿಗಳ ಬಗೆಗೆ ಚಿಂತಿಸಿ ಹೆದರಿಕೊಂಡಿದ್ದಾನೆ ಎನ್ನುತ್ತಾರೆ. 1898ರಲ್ಲಿ ಪ್ರಕಟವಾದ ಎಚ್.ಜಿ.ವೆಲ್ಸ್ರವರ `ವಾರ್ ಆಫ್ ದ ವರ್ಲ್ಸ್ಡ್' ಕೃತಿಯೇ ಇದಕ್ಕೆ ಉದಾಹರಣೆ. ವಾಶಿಂಗ್ಟನ್ನ ಬ್ರೂಕಿಂಗ್ಸ್ ಇನ್ಸ್ಟಿಟ್ಯೂಶನ್ 1960ರಲ್ಲಿ `ಇತರ ಗ್ರಹಗಳಲ್ಲಿ ನಾಗರಿಕತೆಯ ಆವಿಷ್ಕಾರ ಭೂಮಿಯ ನಾಗರಿಕತೆಯನ್ನೇ ನಾಶಪಡಿಸುತ್ತದೆ' ಎಂಬ ಸಾರಾಂಶದ ವರದಿಯೊಂದನ್ನು ನ್ಯಾಸಾಗೆ ಸಲ್ಲಿಸಿತ್ತು. ಎಮೊರಿ ವಿಶ್ವವಿದ್ಯಾನಿಲಯದ ವೈದ್ಯಕೀಯ ಮಾನವಶಾಸ್ತ್ರಜ್ಞ ಮೆಲ್ವಿನ್ ಕೋನರ್ ಹೇಳುವಂತೆ, `ಇತರ ಗ್ರಹಗಳಲ್ಲಿ ಜೀವವಿಕಾಸವಾಗಿದ್ದಲ್ಲಿ ಅದು ಬುದ್ಧಿಮತ್ತೆಗಿಂತ ಹೆಚ್ಚಿಗೆ ಸ್ವಾರ್ಥ, ಅಹಂಕಾರ, ಹಿಂಸೆ ಇರುವುದರ ಸೂಚಕವಾಗಿದೆ. ಅಂತಹ ಗ್ರಹದ ಜೀವಿಗಳೇನಾದರೂ ಭೂಮಿಗೆ ಬಂದಲ್ಲಿ ನಾವು ಇತರ `ಕೀಳು' ಪ್ರಾಣಿಗಳನ್ನು ಶತಶತಮಾನಗಳಿಂದ ನಡೆಸಿಕೊಳ್ಳುತ್ತಿರುವ ಹಾಗೆ ನಮ್ಮನ್ನು ನಡೆಸಿಕೊಳ್ಳುತ್ತಾರೆ'. `ನಾವು ಎಂಥದೇ ಅನ್ಯಗ್ರಹ ಜೀವಿಯನ್ನು ಭೇಟಿಯಾಗಲಿ, ಆ ಜೀವಿಗಳು ನಮ್ಮಷ್ಟೇ ಕೆಟ್ಟವರಾಗಿರುತ್ತಾರೆ' ಎನ್ನುತ್ತಾರೆ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದ ಮೈಕೆಲ್ ಆರ್ಚರ್. ಅವರ ಪ್ರಕಾರ ನಾವು ಕಳುಹಿಸುತ್ತಿರುವ ಸಂಕೇತಗಳು, ನೌಕೆಗಳು ಎಲ್ಲವೂ `ಊಟ'ದ ಆಹ್ವಾನವಾಗಿದೆಯಷ್ಟೆ!
ಆದರೆ ಕಾರ್ಲ್ ಸಾಗನ್ ಮತ್ತು ವಿಲಿಯಂ ನ್ಯೂಮನ್ನಂತಹ ವಿಜ್ಞಾನಿಗಳು ಆಶಾವಾದಿಗಳು. ಅವರ ಪ್ರಕಾರ `ನಾಗರಿಕ' ಹಾಗೂ ತಾಂತ್ರಿಕವಾಗಿ ಮುಂದುವರಿದ ಅನ್ಯಗ್ರಹ ಜೀವಿಗಳು ಆ ರೀತಿ ಇತರ ಗ್ರಹವಾಸಿಗಳ ಮೇಲೆ ದಬ್ಬಾಳಿಕೆ, ಆಳ್ವಿಕೆ ನಡೆಸಲು ಕೆಲವು ತೊಡರುಗಳಿರುತ್ತವೆ. ಅಲ್ಲದೆ ಅಷ್ಟೊಂದು ದೀರ್ಘ ಚರಿತ್ರೆ ಹೊಂದಿರುವಂತಹ ಮುಂದುವರಿದ ನಾಗರಿಕತೆಗಳು `ಕೋಡೆಕ್ಸ್ ಗ್ಯಾಲಾಕ್ಟಿಕ' ಎಂಬ ನೀತಿ ಸಂಹಿತೆಯನ್ನು ಹೊಂದಿರಬಹುದು ಹಾಗೂ ಅವು ನಮ್ಮಂತಹ ಎಳಸು ನಾಗರಿಕತೆಗಳಿಗೆ ಇನ್ನೂ ಶಿಕ್ಷಣ ನೀಡಬಹುದು ಮತ್ತು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದಿದ್ದಾರೆ.

ಮಾನವ ಈ ವಿಶ್ವದಲ್ಲಿ ಒಬ್ಬಂಟಿಯೇ?
ಅನ್ಯಗ್ರಹ ಜೀವಿಗಳಿವೆಯೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಆದರೆ ಖ್ಯಾತ ವಿಜ್ಞಾನಿ ನೋಬೆಲ್ ಪಾರಿತೋಷಕ ವಿಜೇತ ಫ್ರಾನ್ಸ್ನ ಜಾಕ್ವೆಸ್ ಮೊನಾಡ್ ಹೇಳಿರುವಂತೆ ಈ ವಿಶ್ವದಲ್ಲಿ ಮಾನವ ಒಬ್ಬಂಟಿ. ಖ್ಯಾತ ಬ್ರಿಟಿಶ್ ವಿಜ್ಞಾನಿ ರಿಚರ್ಡ್ ಡಾಕಿನ್ಸ್, `ನಾವು ಗಮನಿಸುತ್ತಿರುವ ಈ ವಿಶ್ವ ನಾವು ನಿರೀಕ್ಷಿಸುವ ಲಕ್ಷಣಗಳನ್ನೇ ಹೊಂದಿದೆ- ಅದಕ್ಕೆ ಯಾವುದೇ ವಿನ್ಯಾಸವಿಲ್ಲ, ಯಾವುದೇ ಉದ್ದೇಶವಿಲ್ಲ, ಒಳಿತೆಂಬುದಾಗಲಿ, ಕೆಟ್ಟದೆಂಬುದಾಗಲಿ ಇಲ್ಲ. ಇದೊಂದು ಕುರುಡು, ನಿಷ್ಕರುಣಿ ಅನಾದರದ ವಿಶ್ವ' ಎಂದಿದ್ದಾರೆ. ಧರ್ಮದ ಹುಸಿ ಸರಳುಗಳನ್ನು ಬಗೆದು ಹೊಸ ಚಿಂತನೆಯ ಕೊಡುಗೆಯನ್ನು ನೀಡಿದ ಮೊದಲ ವ್ಯಕ್ತಿ ಚಾರ್ಲ್ಸ್ ಡಾರ್ವಿನ್. ಭೂಮಿಯ ಮೇಲಿನ ಎಲ್ಲ ಜೀವರಾಶಿಯೂ- ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮಜೀವಿಗಳನ್ನೊಳಗೊಂಡಂತೆ- ಒಂದೇ ಮೂಲದಿಂದ ಬಂದವು. ಅವುಗಳ ರಚನೆಯಲ್ಲಿ ಯಾವ ಉನ್ನತ ಶಕ್ತಿಯ ಕೈವಾಡವೂ ಇಲ್ಲ. ವಿಜ್ಞಾನದ ಆದರ್ಶದಲ್ಲಿ ಮುಳುಗಿದ ಬರ್ಟ್ರೆಂಡ್ ರಸೆಲ್ ಸಹ, `ನಮಗೆ ವಿಜ್ಞಾನ ನೀಡುತ್ತಿರುವ ನಂಬಿಕೆಗಳು ಸಹ ಅರ್ಥವಿಲ್ಲದ್ದು, ಉದ್ದೇಶರಹಿತವಾದದ್ದು. ಯಾವುದೇ ಪೂರ್ವೋದ್ದೇಶವಿಲ್ಲದ ರಚನೆ ಈ ಮಾನವ. ಈ ಮಾನವನ ಮೂಲ, ಅವನ ಬೆಳವಣಿಗೆ, ಅವನ ಹೆದರಿಕೆ, ಪ್ರೀತಿ ಪ್ರೇಮ ಮತ್ತು ನಂಬಿಕೆಗಳೆಲ್ಲವೂ ಅಣುಗಳ ಆಕಸ್ಮಿಕ ರಚನೆಗಳಷ್ಟೆ. ಯಾವುದೇ ಶೌರ್ಯ, ಪ್ರೇಮದ ತೀವ್ರತೆ, ಭಾವೋನ್ಮಾದತೆ ವ್ಯಕ್ತಿಯನ್ನು ಅವನ ಸಾವಿನ ನಂತರ ಉಳಿಸುವುದಿಲ್ಲ. ಮಾನವನ ಎಲ್ಲ ಪ್ರಜ್ವಲ ಬುದ್ದಿಮತ್ತೆ, ಸೃಜನಶೀಲತೆ ಎಲ್ಲವೂ ಈ ಸೌರವ್ಯೂಹದ ಸಾವಿನೊಂದಿಗೆ ಹೋಗಲೇಬೇಕು ಹಾಗೂ ಮಾನವನ ಎಲ್ಲ ಸಾಧನೆಗಳೂ ಈ ವಿಶ್ವದ ಭಗ್ನಾವಶೇಷಗಳಲ್ಲಿ ಕೊನೆಗಾಣಲೇಬೇಕು' ಎಂಬ ಕಟುಸತ್ಯವನ್ನು ನುಡಿದಿದ್ದಾನೆ. ವಿಜ್ಞಾನಿ ಜಾಕ್ವೆಸ್ ಮೊನಾಡ್ ಹೇಳಿರುವಂತೆ ಈ ಭೂಮಿಯಲ್ಲಿ ಇಂದು ಮಾನವನಿದ್ದಾನೆಂದರೆ ಅದು ಜೀವ ವಿಕಾಸದ ಹಾದಿಯಲ್ಲಿನ ಕೇವಲ ಆಕಸ್ಮಿಕಗಳಿಂದ ಮಾತ್ರ. ನಾವು ಈ ವಿಶ್ವದಲ್ಲಿ ಒಬ್ಬಂಟಿಗರು. ನಮ್ಮ ಅಸ್ತಿತ್ವಕ್ಕೆ ಯಾವುದೇ ಅರ್ಥವಿಲ್ಲ- ನಾವು ರೂಪಿಸಿಕೊಂಡದ್ದೇ ಅರ್ಥ. ಕೊನೆಗೂ ಮಾನವನಿಗೆ ತಾನು ಈ ವಿಶ್ವದಲ್ಲಿ ಒಬ್ಬಂಟಿಯೆಂಬುದು ತಿಳಿದಿದೆ. ಅವನ ವಿಧಿಯೆಂಬುದು ಎಲ್ಲೂ ಇಲ್ಲ, ಅವನ ಕರ್ತವ್ಯವೇನೆಂಬುದೂ ತಿಳಿದಿಲ್ಲ. ಆಯ್ಕೆಯ ಅವಕಾಶ ಅವನಿಗೆ ಮಾತ್ರವಿದೆ- ಮೇಲಿನ ಬೆಳಕಿನ ಸಾಮ್ರಾಜ್ಯ ಅಥವಾ ಕೆಳಗಿನ ಕತ್ತಲ ಸಾಮ್ರಾಜ್ಯ. ಈ ಭೂಮಿಯ ಮೇಲಿನ ನಮ್ಮ ಅಸ್ತಿತ್ವ ಕೇವಲ ಆಕಸ್ಮಿಕದ್ದಾದಲ್ಲಿ ಅದು ಅತ್ಯಮೂಲ್ಯವೂ ಹೌದು. ಈ ವಿಶಿಷ್ಟ ಹಾಗೂ ಅಪರೂಪದ ಅಸ್ತಿತ್ವವನ್ನು ನಾವು ಕಾಪಾಡಿಕೊಳ್ಳುವ ದಿಸೆಯಲ್ಲಿ ಜಾಕ್ವೆಸ್ ಮೊನಾಡ್ ಹೇಳುವ ಆಯ್ಕೆಯ ಅವಕಾಶದ ಮಹತ್ವದ ಅರಿವಾಗುತ್ತದೆ. ಅದಕ್ಕಾಗಿ ನಾವು ಈ ಅನಂತ ವಿಶ್ವದಲ್ಲಿ ಅನ್ಯಗ್ರಹ ಜೀವಿಗಳ ಶೋಧ ನಡೆಸುವ ಜೊತೆಗೇ ನಮ್ಮ ಅಂತರಂಗಗಳ ಶೋಧ ನಡೆಸಬೇಕಾಗಿದೆ. ಏಕೆಂದರೆ ನಾವು ನಮ್ಮ ನಡುವೆಯೇ ಪರಕೀಯರಾಗಿದ್ದೇವೆ, ಪರಸ್ಪರ ದ್ವೇಷಿಸುವ, ಯುದ್ಧಗಳಿಗೆ ತುದಿಗಾಲ ಮೇಲೆ ನಿಂತಿರುವ `ಅನ್ಯಗ್ರಹ' ಜೀವಿಗಳಾಗಿದ್ದೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ